ನಾನಂದು ಮಲಗಿದ್ದೆ ಅರ್ಧ ಕಣ್ಣನ್ನು ಸುಮ್ಮನೆ ಮುಚ್ಚಿದ್ದೆ
ಕೆಳಗೆ ಮರಳಿನ ಹಾಸಿತ್ತು ಗಾಳಿ ತಂಪಾಗಿ ತಣ್ಣಗೆ ಬೀಸಿತ್ತು
ಚಂದ್ರ ನನ್ನನ್ನೆ ನಗುತ್ತ ನೋಡಿದ್ದ ಸಾಗರದ ತಲೆಯ ಮೇಲಿದ್ದ
ಹಿಂದೆ ಒಂದು ಮರವಿತ್ತು ಗಾಳಿಗೆ ಅದು ತಲೆದೂಗಿತ್ತು
ನಕ್ಷತ್ರಗಳು ಆಗಸದಿ ಕಾಣಲಿಲ್ಲ ಚಂದ್ರನೂ ಏನು ಹೇಳಿರಲಿಲ್ಲ
ಅಷ್ಟರಲ್ಲಿ ಕಾರುಮೋಡಗಳು ಕಂಡವು ಮಳೆಯ ಹೊತ್ತು ತಂದವು
ನನ್ನ ಬಿಟ್ಟರೆ ಅಲ್ಲ್ಯಾರು ಇರಲಿಲ್ಲ ನನಗೂ ನಿದಿರೆ ಬಂದಿರಲಿಲ್ಲ
ಗಾಳಿಗೆ ಚಳಿಯಾಗಿತ್ತು ಆದರೆ ಸಮುದ್ರದ ನಾದ ಇಂಪಾಗಿತ್ತು
ನನಗೆ ಮತ್ತು ಹತ್ತಿತ್ತು ಬೇಸರಕೆ ಏಕಾಂತ ಕೂಡಿ ತಲೆ ತಿರುಗಿತ್ತು
ಏನೋ ಸದ್ದಾಗಿ ಎದ್ದೆ ನಾ ಎಲ್ಲೋ ಬೆಳಕನ್ನು ಕಂಡೆ ನಾ
ಅದು ಯಾವುದೋ ಪ್ರಾಣಿಯೋ ಇಲ್ಲಾ ನನ್ನ ಭ್ರಮೆಯೋ
ಅಥವ ನನಗೇನಾದರು ಕನಸ ಇಲ್ಲ ಮಿಂಚಿತ್ತೆ ಆಗಸ
ಎಷ್ಟೊ ಹೊತ್ತು ಯೋಚಿಸಿದೆ ಕುತೂಹಲಕೆ ಎದ್ದು ಕೂತೆ
ಏಕಾಂತವು ಕದಡಿತ್ತು ಮೌನವು ಮುರಿದು ಹೋಗಿತ್ತು
ಚಂದ್ರನು ಅವಿತ ಮೋಡದ ಹಿಂದೆ ನಕ್ಕಿತ್ತು ಮೋಡ ಚಂದ್ರನ ಮುಂದೆ
ಹುಡುಕಿದೆ ತಡುಕಿದೆ ಓಡುತ್ತ ಕೂಗಿದೆ ಎಲ್ಲೆಡೆ ನೋಡಿದೆ
ಯಾರು ಬಂದರು ನನ್ನ ಜಾಗಕ್ಕೆ ನನ್ನ ಒಂಟಿ ಮನದ ಆಳಕ್ಕೆ
ಏಕೆ ಬಂದರು ನನ್ನನ್ನು ಕೇಳದೆ ಏಕೆ ನಿಂತರು ಎಲ್ಲೂ ಹೋಗದೆ
ಅಷ್ಟಾಗುವಷ್ಟರಲ್ಲಿ ಬಳಿಯೇ ಬಂದರು ನನ್ನೆದುರಿಗೆ ನಗುತ ನಿಂತರು
ಅಯ್ಯೋ ಮತ್ಯಾರು ಅಲ್ಲ ಅದು ನೀನೆ ಹೇಗೆ ಬಂದು ಸೇರಿದೆಯೊ ನಾ ಕಾಣೆ
ನನ್ನೊಳಗಿರುವೆಯೆಂದು ಅಂದುಕೊಂಡಿದ್ದೆ ಆದರೆ ನೀನು ಒಳಗೆ ಹೊರಗೆ ಎಲ್ಲೆಲ್ಲೂ ಇದ್ದೆ
ಬೆಳಕೊಂದ ಕೈಯಲ್ಲಿ ಹಿಡಿದು ನೀ ನಿಂತೆ ನಗುತಿದ್ದೆ ಒಬ್ಬ ದೇವತೆಯಂತೆ
ಆ ನಗುವು ನನ್ನ ಮೂಢತೆಗೊ ನನ್ನ ಪ್ರೀತಿಗೋ ಇಲ್ಲ ನಿನ್ನ ಸೌಂದರ್ಯಕೊ
ನಾನು ಯೋಚಿಸಲಿಲ್ಲ ತಲೆ ಕೆಡಿಸಿಕೊಳ್ಳಲಿಲ್ಲ ನಿನ್ನ ಬಿಟ್ಟು ದೇವರನ್ನು ಇನ್ನೇನೂ ಬೇಡಲಿಲ್ಲ
No comments:
Post a Comment