ಹೊರಗಡೆ ಏನೋ ಸದ್ದು, ಏನು ಅಂತ ನೋಡಿದರೆ ಜೋರಾಗಿ ಬರುತ್ತಿದ್ದ ಮಳೆ. ಮಳೆಯ ಆ ಸದ್ದಿನ ಜೊತೆಗೆ ಮಣ್ಣಿನ ವಾಸನೆ. ಮನಸ್ಸಿನಲ್ಲಿ ಸಂತೋಷ, ಎಂತದ್ದೋ ಸಾಧನೆಯ ಖುಷಿ. ಅಂದು ನಾವು ನಾಟಕದ ತಾಲೀಮಿನಲ್ಲಿ ತಲ್ಲೀನರಾಗಿದ್ದಾಗ ಆದ ಅನುಭವ ಇದು. ಇದು ಒಂದು ಎರಡು ದಿನಗಳ ಸಾಧನೆ ಅಥವ ಕನಸೇನಲ್ಲ. ಅನೇಕ ಕನಸುಗಳಂತೆ ಬಹಳಷ್ಟು ಕಾಯಿಸಿ, ಸತಾಯಿಸಿ ನನಸಿನ ಹಾದಿಗೆ ನಡೆದ ಕಥೆ. ಅಲ್ಲಿ ತಾಲೀಮು ನಿರರ್ಗಳವಾಗಿ ನಡೆಯುತ್ತಿದ್ದರೆ, ಆ ಒಂದು ಕ್ಶಣಕ್ಕೆ ಹಳೆಯದೆಲ್ಲಾ ನನ್ನ ಮುಂದೆ ಹಾದು ಹೋಗಿತ್ತು. ಸಾಮಾನ್ಯ ನಾಟಕ ಮಾಡುವವರ ಜೀವನದಲ್ಲಿ ನೋಡುವ ತರಹ ಬಡತನ, ಕಷ್ಟ, ಕೆಲಸಕ್ಕಾಗಿ ಅಲೆದಾಟ, ಹೀಗೆ ನಾನೇನು ಯುದ್ಧ ಮಾಡಲಿಲ್ಲ. ಆದರೆ ನನಗೆ ಬೇರೆಯೇ ಬಣ್ನದ ತಡೆಗಳು ಎದುರಾಗಿದ್ದವು. ಮನೆಯಲ್ಲಿ ತೋರಿದ ನಿರುತ್ಸಾಹವೇ ಇರಬಹುದು, ನಾಟಕ ರಂಗದ ರಾಜಕೀಯಗಳೇ ಆಗಿರಬಹುದು, ಜನರ ಕಣ್ಣಲ್ಲಿ ನನ್ನ ಬಗ್ಗೆ ಕಂಡ ಕೀಳು ಭಾವನೆ ಇರಬಹುದು, ಹೀಗೆ ನನ್ನನ್ನು ಈ ನಾಟಕ ಜಗತ್ತು ಆಡಿಸಿತು. ಆದರೆ ನನ್ನ ಕನಸು ಇವೆಲ್ಲಕ್ಕಿಂತ ಬಲಶಾಲಿಯಾಗಿದ್ದರಿಂದ ಇಂದು ಕಲಾಕ್ಷೇತ್ರದಲ್ಲಿ ಆ ಮಳೆಯ ದರ್ಶನವಾಗುವ ಭಾಗ್ಯ ಒದಗಿತ್ತು.
ನನಗೆ ಮುಂಚಿನಿಂದಲೂ ನಾಟಕವಾಡುವ ಒಂದು ಆಸೆ. ಸಣ್ಣವನಾಗಿಂದನಿಂದಲೂ ಈ ಚಟ ಅಂಟಿಸಿಕೊಂಡು ಬಂದಿದ್ದೆ. ಒಂದು ದಿನ ಶಾಲೆಯಲ್ಲಿ ಒಂದು ನಾಟಕಕ್ಕೆ ಸೇರಿದ ನಾನು ಬಹುಮಾನ ಗೆದ್ದಿದ್ದೆ. ಅಂದು ನನಗೇ ಗೊತ್ತಿಲ್ಲದೆ ನನ್ನ ಭವಿಷ್ಯವನ್ನು ನಾಟಕಕ್ಕೆ ಕೊಟ್ಟುಬಿಟ್ಟಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮತ್ತೆ ರಂಗ ಪ್ರವೇಷ ಮಾಡುವ ಸಮಯ, ಆಸೆ, ತವಕ ಹಾಗು ಅವಕಾಶ ಇವೆಲ್ಲಾ ಸಿಕ್ಕಿದ್ದವು. ನನಗೆ ಇನ್ನೂ ನೆನಪಿದೆ, ಮೊದಲ ದಿನ ನಾನು ವಿಮೂವ್ ಗೆ ಬಂದಾಗ ಎಲ್ಲವೂ ವಿಚಿತ್ರವಾಗಿ ಕಂಡವು. ಅಷ್ಟು ಸುಲಭವಾಗಿ ನನಗೆ ಹೊಂದದ ಜನ, ಕಥೆಯೇ ಗೊತ್ತಿಲ್ಲದ ಒಂದು ಆಂಗ್ಲ ನಾಟಕ, ರಂಗದ ಮೇಲೆ ಮುಖವೇ ಕಾಣದ ಒಂದು ಸಣ್ಣ ಪಾತ್ರ. ಅಂದು ಅನಿಸಿತ್ತು, ಮನೆಗೆ ವಾಪಸ್ ಹೋಗುವ ಎಂದು, ಮತ್ತೆ ಬರಬಾರದೆಂದು. ಆದರೆ ನಾನು ಮನಸ್ಸಿನ ಮಾತು ಕೇಳಲಿಲ್ಲ, ಮತ್ತೆ ಮುಂದಿನ ದಿನ ವಾಪಸ್ ಬಂದಿದ್ದೆ,ಮುಖವಾಡ ಹಾಕಿ ಮಾಡುವ ಪಾತ್ರವನ್ನು ಒಪ್ಪಿದ್ದೆ. ಅಲ್ಲಿಯೇ ಒಂದು ಕನಸು ಶುರುವಾಗಿತ್ತು,.
ಮಾಲ್ಗುಡಿ ಡೇಸ್ ಒಂದು ಅಪಾರ ನಿರೀಕ್ಷೆಯ ನಾಟಕವಾಗಿತ್ತು. "ನನ್ನವಳ ಕಾಗದ" ದ ಆಕರ್ಷಣೆ ಹಾಗು "ತತ್ಯನ ಮೋಹ" ದ ಅಭಿನಯಕ್ಕೆ ಆಸ್ಪದ ಇವೆರಡೂ ಇದರಲ್ಲಿ ಇದ್ದು, ಎಲ್ಲಕ್ಕಿಂತ ಹೆಚ್ಚಾಗಿ ಇದಕ್ಕೆ ಆಗಲೇ ಇದ್ದ ಹೆಸರು ಜನರ ನಿರೀಕ್ಷೆ ಅಪಾರವಾಗಿತ್ತು. ಬಹುಶಹ ಇಲ್ಲಿಯವರೆಗೂ ಈ ನಾಟಕ ಮಾಡದೆ ಇದ್ದಿದ್ದು ಇದರಿಂದಾಗಿಯೇ ಇರಬೇಕು. ನಾವು ಇದನ್ನು ನಾಟಕವಾಗಿ ಪ್ರಯೋಗಿಸುವ ಯೋಚನೆ ಮಾಡಿದ್ದು ಏಪ್ರಿಲ್, ೨೦೦೯ ತಿಂಗಳಿನಲ್ಲಿ. ನಂತರ ಸಣ್ಣ ಕಥೆಗಳನ್ನು ಆಧರಿಸಿ ಅದನ್ನು ನಾಟಕಕ್ಕೆ ರೂಪಾಂತರಿಸುವಲ್ಲಿ ಆಗಸ್ಟ್ ತಿಂಗಳೇ ಆಗಿತ್ತು. ಅಲ್ಲಿಂದ ಶುರುವಾಯಿತು ೯ ತಿಂಗಳ ಪರಿಶ್ರಮ, ಇದು ಪರಿಶ್ರಮ ಮಾತ್ರವಲ್ಲದೆ ತಪಸ್ಸಿನಂತೆಯೇ ಆಗಿತ್ತು.
ತಾಲೀಮು ಶುರುವಾಗಿ ಒಂದು ತಿಂಗಳೇ ಆಗಿತ್ತು, ಕಥೆಗಳನ್ನು ನಮ್ಮದೇ ಆದ ಇನ್ನೊಂದು ಕಥೆಯಲ್ಲಿ ಹೆಣೆದು ಅದನ್ನು ನಾಟಕವನ್ನಾಗಿ ಮಾಡಿದೆವು. ಸುಮಾರು ೧೫ ಜನ ಕೆಲಸ ಮಾಡುತ್ತಿದ್ದ ನಾಟಕ ಅದು. ಒಂದು ತಿಂಗಳಾದರೂ, ಯಾರಿಗೂ ತಮ್ಮ ಸಾಲುಗಳು ಬಂದಿರಲೇ ಇಲ್ಲ, ತಾಲೀಮಿಗೆ ಸರಿಯಾದ ಜಾಗ ಇರಲಿಲ್ಲ, ನಾಟಕ ಹೇಗೆ ಬರುವುದೋ ಎಂಬ ಭಯ, ಎಲ್ಲಿ ಯಾವಾಗ ಇದು ರಂಗದ ಮೇಲೆ ಬರುವುದೋ ಗೊತ್ತಿರಲಿಲ್ಲ, ಈ ನಾಟಕ ಸೋತರೆ ನಮ್ಮ ರಂಗದ ಪ್ರಯಾಣ ಮುಗಿದೇ ಹೋಗುವ ಭಯ, ಇವೆಲ್ಲದರ ನಡುವೆ ತಾಲೀಮು ನಡೆದಿತ್ತು.
ಇನ್ನೂ ಕೆಲವು ದಿನಗಳು ಕಳೆದವು, ತಾಲೀಮಿನಲ್ಲಿ ಅದೆಂಥದ್ದೋ ಸಡಿಲತೆ ಮೂಡಿತ್ತು. ನಾಟಕ ಮುಂದುವರಿಯುತ್ತಲೇ ಇರಲಿಲ್ಲ, ಹಲವು ಬಾರಿ ನನಗೆ ಇದನ್ನು ಇಲ್ಲಿಗೇ ನಿಲ್ಲಿಸಿ ಬೇರೆ ಏನಾದರು ಸುಲಭದ ನಾಟಕ ಮಾಡುವ ಅಂತ ಅನಿಸಿದ್ದುಂಟು, ಆದರೆ ಎಲ್ಲೋ ಒಂದು ಕಡೆ ಇದನ್ನು ಮಾಡಿಯೇ ತೀರಬೇಕು ಎನ್ನುವ ಛಲವೂ ಇತ್ತು. ಕ್ರಮೇಣ ೧೫ರಲ್ಲಿ ೧೦ ಜನ ಬಿಟ್ಟೇ ಹೋಗಿದ್ದರು, ಹೊಸಬರು ಬಂದಿದ್ದರು. ಶುರುವಾದ ತಾಲೀಮು ೪-೫ ತಿಂಗಳಲ್ಲಿ ಟೈಟಾನಿಕ್ ನಾವೆಯಂತೆ ಮುಳುಗುತ್ತಿತ್ತು, ಅಷ್ಟರಲ್ಲಿ ಒಂದು ಚಂಡಮಾರುತ ಬಡಿಯಿತು. ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದವನು ಒಬ್ಬ ಮಧ್ಯದಲ್ಲಿ ಇದನ್ನು ಬಿಟ್ಟು ಹೊರಟುಹೋದ, ದುರಂತ ಏನೆಂದರೆ ಅವನು ನಮಗೆ ಹತ್ತಿರದ ಸ್ನೇಹಿತನೇ ಆಗಿದ್ದನು, ನಮ್ಮ ಜೊತೆ ಮಾಲ್ಗುಡಿಯ ಕನಸನ್ನು ಕಂಡಿದ್ದನು. ಇನ್ನೇನು ಎಲ್ಲಾ ಮುಗಿದು ನಾಟಕ ತಯಾರಾಗುವ ವೇಳೆ ನಮಗೆ ಈ ಆಘಾತ ಕೊಟ್ಟಿದ್ದ. ಇದು ಸಾಲದು ಅಂತ, ವೀಮೂವ್ ನ ಹಿರಿಯ ಮುಖ್ಯಸ್ತರಲ್ಲಿ ದೊಡ್ಡ ಜಗಳ ಬೇರೆ ನಡೆಯಿತು. ಇನ್ನು ಮಾಲ್ಗುಡಿ ಅನ್ನುವ ನೌಕೆಗೆ ಕಡೆಯ ರಂಧ್ರ ಕೊರೆದಾಗಿತ್ತು.
ಇಂದು ಮಾಲ್ಗುಡಿ ರಂಗದ ಮೇಲೆ ಇಷ್ಟು ಉತ್ತಮವಾಗಿ ಮೂಡಿ ಬರುವಲ್ಲಿ ಹಲವರ ಪಾತ್ರ ಗಣನೀಯ. ನಾಟಕ ರೂಪದಿಂದ ಹಿಡಿದು ನಾಟಕಕ್ಕೆ ಇಂಥವರು ಇಂತಹ ಪಾತ್ರ ಮಾಡಬೇಕು, ರಂಗ ಸಜ್ಜಿಕೆ ಹೀಗೇ ಇರಬೇಕು, ಪಾತ್ರ ಮಾಡುವವರು ಇಂತದ್ದೇ ಬಟ್ಟೆ ತೊಡಬೇಕು, ಹೀಗೆ ಈ ನಾಟಕ ಇವತ್ತು ನಾಟಕ ಅಲ್ಲದೇ ಒಂದು ಸಾಧನೆಯೇ ಆಗಿರುವುದರ ಹಿಂದೆ ಹಲವರ ಪರಿಶ್ರಮ ಕಾರಣ. ಸಡಿಲವಾಗಿದ್ದ ತಾಲೀಮು ಇಂದು ಒಂದು ತಪಸ್ಸಿನಂತೆ, ಒಂದು ಅದ್ಭುತ ಪ್ರಯೋಗಶಾಲೆಯಾಗಿ ಆಗಿರುವುದಕ್ಕೆ ನನ್ನ ಮಿತ್ರರ ಪಾತ್ರ ಅಪರಿಮಿತ.
ಶುರುವಾದ ಐದು ತಿಂಗಳುಗಳಲ್ಲಿ ದಿಕ್ಕೇ ಇಲ್ಲದೆ ಅನಾಥವಾಗಿ ಬಿದ್ದಿತ್ತು ಈ ಮಾಲ್ಗುಡಿ ಎಂಬ ನಾಟಕ. ಇದರ ದಯನೀಯ ಸ್ಥಿತಿ ಕಂಡೇ ಏನೊ, ನನ್ನ ಮತ್ತು ನನ್ನ ಮಿತ್ರರಲ್ಲಿ ಇದ್ದ ಆಸೆ ಒಂದು ಮಹಾನ್ ಛಲವಾಗಿ ಬದಲಾಗಿ ಒಂದು ಹೊಸ ರೂಪವೇ ಮಾಲ್ಗುಡಿಗೆ ಕೊಟ್ಟಿತ್ತು. ಅದಕ್ಕೆ ಎಷ್ಟು ಪರಿಷ್ರಮ ಹೋಯಿತು ಅಂದರೆ, ನಾಲ್ಕೇ ತಿಂಗಳಲ್ಲಿ ಅದಕ್ಕೆ ಒಂದು ಅರ್ಥ ಕೊಟ್ಟಿದ್ದೆವು. ಕಥೆಯನ್ನು ಬದಲಾಯಿಸಿ ಹೊಸದಾಗಿ ತಾಲೀಮು ನಡೆಸಿದ್ದೆವು, ರಂಗಸಜ್ಜಿಕೆ ಉತ್ತಮವಾಗಿ ಮೂಡಿಬಂದಿತ್ತು. ನಾನು, ಅಭಿ ಹಾಗು ರಂಗ ಒಂದು ಸಂಜೆ ಘಂಟೆಗಟ್ಟಲೆ ಕೆ.ಆರ್.ಮಾರುಖಟ್ಟೆಯ ಕೊಚ್ಚೆಯಲ್ಲಿ ಪರಿಕರಗಳನ್ನು ಹುಡುಕಿ ಅಲೆದದ್ದು ನಾನು ಜೀವನದಲ್ಲಿ ಮರೆಯಲೇ ಆಗದ ಒಂದು ಭಾನುವಾರದ ಸಂಜೆ. ೨೫ ರ ಹರೆಯದ ಹುಡುಗರು ಪಿ.ವಿ.ಆರ್, ಐನಾ಼ಕ್ಸ್, ಮಂತ್ರಿ ಅನ್ನದೆ ಕೊಳಚೆಯಲ್ಲಿ, ಸಿಗುವ ಒಂದು ಭಾನುವಾರದ ಸಂಜೆ ಅಲೆಯುವುದೇ ನಾವು ಮಾಡಿದ್ದ ನಾಟಕ ಜೀವನದ ಹೋರಾಟ.
ಇದೆಲ್ಲ ಆಗಿ ಇಂದು ಎರಡು ಬಾರಿ ಯಶಸ್ವಿಯಾಗಿ ರಂಗದ ಮೇಲೆ ಮಾಲ್ಗುಡಿಯನ್ನು ತಂದು ನಿಲ್ಲಿಸಿದ್ದೇವೆ. ಅಷ್ಟೇ ಅಲ್ಲದೆ, ಈ ೧೦ ತಿಂಗಳ ಯುದ್ಧದಿಂದ ೧೩ ಜನ ತಮ್ಮ ಕಣ್ಣಿನಲ್ಲಿ ಹೊಸ ಆಸೆಗಳನ್ನು ಮೂಡಿಸಿಕೊಂಡು ಹೊರಬಂದಿದ್ದಾರೆ. ಉತ್ಸಾಹ ದುಪ್ಪಟ್ಟಾಗಿದೆ, ಆಸೆ ಗಗನಕ್ಕೇರಿದೆ, ಸಂದೇಹ ಇಲ್ಲವಾಗಿದೆ.
ಅಂದು ಮಳೆಯಿಂದ ಬಂದ ಆ ಮಣ್ಣಿನ ವಾಸನೆ, ನನ್ನ ೧೦ ವರುಷಗಳ ಕನಸಿಗೆ ಬಣ್ಣ ತುಂಬಿತ್ತು......ಕನಸು ಹೊಸದಾರಿಯನ್ನು ಹುಡುಕಿ ನಾಗಾಲೋಟದಲ್ಲಿ ಸಾಗಿತ್ತು.....ನನ್ನ ಮುಖದ ಮೇಲೆ ಅಷ್ಟರಲ್ಲಿ ಕಿರುನಗೆಯೊಂದು ಮೂಡಿತ್ತು....
2 comments:
Aha! kya baat hai.. Written really nice.. too good harsha..
@ Vijayendra :: Thankyou :-)
Post a Comment