Wednesday, February 15, 2012

ಕನಸೆನ್ನುವುದು ಒಂದು ಬಣ್ಣದ ಕನ್ನಡಿ
ಘಟನೆಯೆಂಬ ನೈಜತೆಯ ಮುನ್ನುಡಿ
ಹೊರ ನೋಟಕ್ಕೆ ಸಿಗಿವುದು ಬರಿಯೆ ತುಣುಕು
ಅದನ್ನು ನಂಬಿ ಹೇಗೆ ಮಾಡುವೆ ನೀ ಅದರದೇ ಅಣಕು?

ಹೌದು, ಒಡೆದಿದೆ ಅದು ಹೊರನೋಟಕ್ಕೆ
ಬಿರಿದಂತಾಗಿದೆ ನಿನ್ನ ನಗೆಪಾಟಲಿನ ಆಟಕ್ಕೆ
ಆದರೆ ನಿನಗೆ ಕಾಣಿಸುತ್ತಿಲ್ಲವೆ, ಆದರೂ ಅದರ ಚೂರು
ಎಲ್ಲದರಲ್ಲೂ ಮತ್ತೆ ಕಂಡ ಅದೇ ಕನಸು ಆಗಿವೆ ನೂರು.

ಚೂರಾದ ಗಾಜು ಕಾಲಿಗೆ, ಅದರ ಬೆರಳಿಗೆ ಸಿಕ್ಕಿವೆ
ಸಿಕ್ಕು ಅವನ್ನು ಚುಚ್ಚಿ, ಝಲ್ಲನೆ ನೆತ್ತರು ಚಿಮ್ಮಿದೆ
ನೋಡು ಸರಿಯಾಗಿ ಅಲ್ಲಿ, ಅದು ಜೋರಾಗಿ ಹರಿದಿದೆ
ಹರಿದು ಹರಿದು ಬಿಸಿಲ ದಾರಿಯನು ನನಗಾಗಿ ತಣಿಸಿದೆ

ಕನಸೆನ್ನುವುದು ಒಂದು ಬಣ್ಣದ ಕನ್ನಡಿ
ಘಟನೆಯೆಂಬ ನೈಜತೆಯ ಮುನ್ನುಡಿ
ಹೊರ ನೋಟಕ್ಕೆ ಸಿಗಿವುದು ಬರಿಯೆ ತುಣುಕು
ಅದನ್ನು ನಂಬಿ ಹೇಗೆ ಮಾಡುವೆ ನೀ ಅದರದೇ ಅಣಕು?

Wednesday, November 9, 2011

ಮಾಯೆ


ಅಂದು ಕಂಡಿತು ಬರಲು ಕೂಗಿತು
ಮನದ ತವಕವಾಯಿತು
ಕೋಟಿ ಚಂದ್ರರ ಕೋಟಿ ಸೂರ್ಯರ
ಸಾಟಿ ಬೆಳಕನು ಜ್ವಲಿಸಿತು

ನನ್ನ ಕಾಲ್ಗಳ ಹಿಡಿದು ಎಳೆಯಿತು
ಸರಪಳಿಗಳ ಮುರಿದಿತು
ತಲೆಗೆ ನಾಟಿ ನನ್ನನದರ
ಕೈಗೊಂಬೆ ಮಾಡಿ ಆಡಿತು

ಸುತ್ತಮುತ್ತಲು ಕಾಣದಾಯಿತು
ಅದರ ಯೋಚನೆ ಸುಳಿಯಿತು
ಕಾಣದ ಹಾಗೆ ಹರಡಿ ಪದರ
ನಕ್ಕು ಕೇಕೆ ಹಾಕಿತು

ಕಡೆಗೆ ತೆವಳುವ ನನ್ನ ಸೆಳೆಯಿತು
ತನ್ನ ದರುಶನ ನೀಡಿತು
ಕೋರೆಹಲ್ಲುಗಳನು ಚಾಚಿ ಅದರ
ಮಾಯೆ ನನ್ನನೆ ನೋಡಿತು

Monday, October 17, 2011

ಏಕಾಯಿತು ಹೇಳು ಹಿಂಗೆ?


ನಾನಂದು ಕೊಂಡೆ ಅಂದು
ನನಗಾಗಿಯೆ ನೀ ಎಂದು
ಪ್ರತಿ ಕ್ಷಣವು ಜೊತೆಗಿರುವೆವೆಂದು
ಏಕಾಯಿತು ಹೇಳು ಹಿಂಗೆ?

ಆ ನಿನ್ನ ಬಟ್ಟಲು ಕಣ್ಣು
ನಿನ್ನ ಕೆನ್ನೆ ಮಾವಿನ ಹಣ್ಣು
ಭ್ರಮೆಯಲ್ಲವೇ ನೀ ಹೆಣ್ಣು
ಏಕಾಯಿತು ಹೇಳು ಹಿಂಗೆ?

ಉಸಿರುಸಿರಲಿ ಬೆರೆತು ಬಂತು
ನನ್ನಲ್ಲೆ ನೀ ಸೇರಿದೆಯೆಂತು
ಕಣ್ಣಿಗಾದರೆ ಕಾಣದೆ ಹೋಯಿತು
ಏಕಾಯಿತು ಹೇಳು ಹಿಂಗೆ?

ನಿನಗಾಗಿ ನನ್ನನೆ ಮರೆತೆ
ನಿನ್ನ ಆಸೆ ಕೋಪಗಳರಿತೆ
ನಿನ್ನ ಧ್ಯಾನ ಗಾನದಿ ಬೆರೆತೆ
ಏಕಾಯಿತು ಹೇಳು ಹಿಂಗೆ?

ಹ್ರ‍್ದಯವೊಂದು ನಿನಗೂ ಇಲ್ಲವೆ
ನನ್ನ ಹೃದಯವನೇಕೆ ಕೊಲ್ಲುವೆ
ನಾ ನಿನ್ನ ಪ್ರೇಮಿಯೆ ಅಲ್ಲವೆ
ಏಕಾಯಿತು ಹೇಳು ಹಿಂಗೆ?

ಆಸೆ ಹುಸಿಯಾಗಿ ನನಗೆ
ಬದುಕನ್ನೆ ಕೊಟ್ಟೆ ನಿನಗೆ
ನೀನದನ ಕದ್ದೆ ಕೊನೆಗೆ
ಏಕಾಯಿತು ಹೇಳು ಹಿಂಗೆ?

Wednesday, October 12, 2011

Anda Pinda Bhramaanda- part6 Love guru


ಆಗ ತಾನೆ ಅಮೇರಿಕದಲ್ಲಿ “Recession-ನಾಶ “ ಮಹಾ ಯಾಗ  ಮಡಿಸಿ ಬಂದಿದ್ದ ಗುರುಜಿ ಪೂರ್ತಿ ಸುಸ್ತಾಗಿದ್ದರು. ಅಷ್ಟರಲ್ಲಿ  ಸಾಲದು ಅಂತ ನಮ್ಮ ಬೆಂಗಳೂರಿನ  “Wockhardt” ನಲ್ಲಿ “Swine-flu” ರೋಗಿಗಳು  ಜಾಸ್ತಿ ಆಗಿ ತುಂಬಾ ವ್ಯಾಪಾರ  ಆದ ಖುಷಿಯಲ್ಲಿ “Swine-flu” ಗೆ ಮೃತ್ಯುಂಜಯ ಹೋಮ ಮಾಡಿಸಲು ಬೇರೆ ಕೇಳಿಕೊಂಡಿದ್ದರು. ಇಷ್ಟೆಲ್ಲಾ “Hectic Life” ನ ನಡುವೆ ನಮ್ಮ ಗುರುಜಿ “T.V” ಯಲ್ಲಿ  ಕೂಡ ಕಾರ್ಯಕ್ರಮ ಮಾಡುತ್ತಿದ್ದರು.
ಆದರೆ ಇತ್ತೀಚೆಗೆ  ಗುರುಜಿಯ “ T.V” ಕಾರ್ಯಕ್ರಮ “ T.R.P “ ಕಡಿಮೆ ಆಗಿ ಟುಸ್ ಆಗಿತ್ತು. ಅದೊಂದೇ ಗುರುಜಿಗಿದ್ದ ದುಃಖ. ಅದಕ್ಕೆ ಪರಿಹಾರ ಅಂತ ಇರೋ ಬರೋ ದೇವರಿಗೆಲ್ಲ ಹರಕೆ ಹೊತ್ತರು. ಅಲ್ಲದೇ ಬೇರೆ “ Channel “ ನಲ್ಲಿ ಭವಿಷ್ಯ ಹೇಳುವರ ಹತ್ತಿರವೂ ತಮ್ಮ ಜಾತಕ ತೋರಿಸಿ ಆಯಿತು. ಆದರೂ ಏನು ಪ್ರಯೋಜನವಾಗಲಿಲ್ಲ. ಸುಮ್ಮನೆ ಬೇರೆಯವರ “T.R.P” ಬೆಳೆಯಿತು. ಕಡೆಗೆ ಗುರುಜಿ ನಿರ್ಧಾರ ಮಾಡೇಬಿಟ್ಟರು, ತಾನು ಸ್ವಲ್ಪ “Modernize” ಆಗಲೇಬೇಕೆಂದು ಹಾಗು ನಮ್ಮ ಬೆಂಗಳೂರಿನ ಹಲವಾರು ಯುವಕರಿಗೆ ಸರಿಯಾದ ದಾರಿ ತೋರಿಸಬೇಕೆಂದು ತಮ್ಮ ಕಾರ್ಯಕ್ರಮವನ್ನು “ Love-Guru” ಅಂತ ಬದಲಾಯಿಸೇಬಿಟ್ಟರು. ಅದನ್ನು ಸರಿಯಾಗಿ Feb 14th ರಂದೇ ಶುರುವೂ ಮಾಡಿಬಿಟ್ಟರು.
ಲವ್ ಗುರು ಶುರು ಆಗಿದ್ದೇ  ತಡ, T.R.P ಆಕಾಶಕ್ಕೆ ಹಾರಿತು, ನಮ್ಮ ಗುರುಜಿ ಗಂತು ಸಂಭ್ರಮವೋ ಸಂಭ್ರಮ. ಕೂದಲಿಗೆ ಬಣ್ಣ ಹಾಕಿಕೊಳ್ಳುವುದೇನು, ಮುಖಕ್ಕೆ “Cream” ಹಚ್ಚುವುದೇನು, ಹೊಸ ಬಟ್ಟೆ ಹಾಕುವುದೇನು? ಇದೆಲ್ಲ ನೋಡಿ ಅವರ ಹೆಂಡತಿಗೆ ಸಂಶಯ ಬೇರೆ ಶುರುವಾಗಿಬಿಟ್ಟಿತು. ಅದನ್ನೆಲ್ಲ ತಲೆಗೆ ಹಾಕಿಕೊಳ್ಳದೆ ಗುರುಜಿ ತಮ್ಮ ಅಲಂಕಾರ ಮುಂದುವರಿಸಿದ್ದರು. ಹೀಗೆ ಖುಷಿಯಲ್ಲಿ ಇನ್ನೇನು “Studio “ ಗೆ ಕಾಲಿಡಬೇಕು, ಅಷ್ಟರಲ್ಲಿ ಯಾರೋ “Spot Boy” ಇವರ ಹತ್ತಿರ ಬಂದು, “ ರೀ ತಾತ, ಹುಡುಗೀರು ನಿಮ್ಮನ್ನ ಮದುವೆ ಆಗು ಅಂತಲ್ರಿ ಕೇಳದು! ಬೇರೆ ಹುಡುಗರು ಯಾಕೆ ಅವರನ್ನ ನೋಡ್ತಿಲ್ಲ ಅಂತ ಕಣ್ರಿ ಕೇಳದು. ಈ ವಯಸ್ಸಲ್ಲಿ ನಿಮ್ಗೆ ಇದು ಬೇಕ? “ ಅಂದುಬಿಟ್ಟ. ಗುರುಜಿಗೆ ಒಟ್ಟೊಟ್ಟಿಗೆ ಕೋಪ ಹಾಗು ಜ್ನಾನೋದಯ ಎರಡೂ ಆದವು. ಸರಿ ಇನ್ನೇನು ಮಾಡದು, ಬಂದಾಯಿತಲ್ಲ ಕಾರ್ಯಕ್ರಮ ಮುಗಿಸೇ ಬಿಡೋಣ ಅಂತ ಸುಮ್ಮನಾದರು.
ಮೊದಲನೇ ಕರೆ, “ನಮಸ್ಕಾರ ಗುರುಜಿ “.
ಗು : “ ಗುರುಜಿ ಅಲ್ಲಪ “Love – ಗುರುಜಿ” “  ಹೋಗ್ಲಿ ನಿನ್ ಹೆಸ್ರೇನು?”
“ ರೀ, P.J ಹೊಡಿತೀರಲ್ರಿ. ನನ್ನ ಹೆಸರು ಸಮೀರ್ “
ಗು : “ ನಿನ್ಗೆ Love-Problem ಇದೆಯೇ “
“ ಥು ನಿಮ್ ಮುಖಕ್ಕೆ!! ಅಲ್ರೀ ನಾನ್ಯಾಕ್ರೀ ನಿಮ್ಗೆ ಕರೆ ಮಾಡ್ಲಿ ಇಲ್ದಿದ್ರೆ? ನನ್ Boyfriend ನನ್ಗೆ ಕೈ ಕೊಟ್ಟುಬಿಟ್ಟ ಅದಕ್ಕೆ ಪರಿಹಾರ ಹೇಳಿ. ಮೊನ್ನೆ ತಾನೆ ಇಬ್ರು ಒಟ್ಗೆ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಮಾಡ್ಸಿದ್ವಿ. ಅದೇನಾಯ್ತೋ ಏನೋ ಆ ಪೂಜಾರೀನ ನೋಡಿದ್ಮೇಲೆ ನೆನ್ನೆಯಿಂದ ನನ್ ಹತ್ರ ಮಾತೇ ಆಡ್ತಿಲ್ಲ. “
ಗು : “ ನೀನು ಹುಡುಗ  ತಾನೆ? ಖರ್ಮ ಖರ್ಮ, ಶನಿ ನಿನ್ಗಲ್ಲಪ್ಪ  ನಂಗೆ ಬಡ್ಕೊಂಡಿರದು.”
“ಲೇ ಮುದಿಯ ಏನೋ ಪಾಪ ಪರಿಹಾರ ಹೇಳ್ತಿಯ ಅಂತ ಕರೆ ಮಾಡಿದ್ರೆ ತಲೆ ಹರಟೆ ಮಾಡ್ತಿಯ? !॒॒॒॒॒@#$%^&*() ಇಡೋ Phoneಊ “
ಎರಡನೇ ಕರೆ “ ನಮಸ್ಕಾರ ಗುರುಜಿ ನನ್ನ ಹೆಸರು ರಮೆಶ ಅಂತ ”.
ಗು : “ ನಿಂಗೂ  ಹುಡುಗರ ತೊಂದರೆನೆ? “
“ಚೆ ಚೆ ಇಲ್ಲ ಗುರುಜಿ. ಹುಡುಗಿ ತೊಂದರೆ”
ಗು : “ ಅಭ್ಬ ಬದುಕಿದೆ. ಅದೇನು ಹೇಳು ಬೇಗ “
“ ನಾನು ಒಬ್ಳನ್ನ ಇಷ್ಟ ಪಡ್ತಿದಿನಿ, ಔಳು ಇನ್ಯಾರೊ ಹುಡುಗೀನ ಇಷ್ಟ ಪಡ್ತಾಳಂತೆ “
ಗು : “ ಥು ಹಾಳಾದ್ದು ಅದ್ಯಾವ್ ಮಗ್ಗ್ಲಲ್ಲಿ ಎದ್ದಿದಿನೋ  ಗೊತ್ತಿಲ್ಲ. ಲೇಯ್ ಇಡಯ್ಯ Phoneಉ  ತಲೆಹರಟೆ “
ಮೂರನೇ ಕರೆ… “  ನಮಸ್ಕಾರ ಲವ್-ಗುರುಜಿ “
ಗು : “ಅಬ್ಬ ಕಡೆಗು  ಹುಡುಗಿಯ ಧ್ವನಿ…ಏನು ಹೇಳಮ್ಮ”
“ ಗುರುಜಿ, ನಾನು ಒಬ್ಬ ಹುಡುಗನ್ನ ಇಷ್ಟ ಪಡ್ತಿನಿ, ಆದ್ರೆ ಮನೆಯಲ್ಲಿ ಒಪ್ಪಲ್ಲ”
ಗು : “ ಏನು ಕೆಲ್ಸ  ಹುಡುಗನ್ದು?“
“ಹುಡುಗ ನಮ್ಮನೆ ಹತ್ರ cycle blow ಹೊಡಿತಾನೆ”
ಗು : “ ಸರಿ ಸರಿ  ಅರ್ಥ ಆಯ್ತು ಬಿಡು. Love is Blind, ಪಾಪ  ನೀನೇನ್ ಮಾಡ್ತಿಯ. ಅಲ್ಲ ಅದೇನ್  ಅಷ್ಟ್ ಖುಶಿಲಿ ಹೇಳ್ತಿಯಲ್ಲ Blow ಹೊಡಿತಾನೆ ಅಂತ ಒಳ್ಳೆ Software Engineer ಥರ? “
“ಅಯ್ಯೋ ಅದ್ರಲ್ಲೇನಿದೆ? Recession ಅಂತ Software Engineerಗು ಔನಷ್ಟೇ ಸಂಬಳ ಇವಾಗ. ಅದಲ್ದೆ Cycle Blow ಹೊಡ್ಯೋದಕ್ಕೆ Recession ಅನ್ನದೇ ಇಲ್ಲ”
ಗು : “ ಹಾಳಾಯ್ತು. ಕಲಿಯುಗ ಕಲಿಯುಗ. ಸರಿ ನಿನ್ನ  ಜಾತಕ ನೋಡಿದ್ರೆ ನಿಮ್ಮಪ್ಪಂಗೆ  ಶನಿ ದೆಸೆ, ನಿನ್ನ Lover ಗೆ ಶುಕ್ರ  ದೆಸೆ ಇದೆ. ಒಂದು ಕೆಲಸ ಮಾಡು, ಮನೆಯಲ್ಲಿ ಹೇಳ್ದೆ ಕೇಳ್ದೆ ಔನ್ ಜೊತೆ ಓಡಿ ಹೋಗಿ ಮದುವೆ ಆಗಿ ಮಕ್ಳಾದ್ಮೇಲೆ ಮನೇಗ್ ವಾಪಸ್ ಹೋಗು “
“ ಸರಿ ಗುರುಜಿ Thanks ಈ ಮನೆ ಹಾಳ್ Idea ಹೇಳಿದ್ದಕ್ಕೆ  “
ಗು : ತ್ರುಪ್ತಿ ಆಯ್ತು  ಇವತ್ತು ಸದ್ಯ….
ಗುರುಜಿ ಮನೆಗ್  ಬಂದು ಇನ್ನೇನು ಮಲಗಬೇಕು, ಅವರ  ಹೆಂಡತಿಯ ಕಠೋರ ಧ್ವನಿ ಕೇಳತ್ತೆ, “ ರೀ ಭಾಗ್ಯ ಎಲ್ರೀ “. “ಅಯ್ಯೋ ಪಾಪ ಮಗು College ಇಂದ ಬಂದಿರಲ್ಲ ಬಿಡೇ “ . “ ನಿಮ್ ದಡ್ತನಕ್ ಇಷ್ಟ್ ಬೆಂಕಿ ಹಾಕ, ಇವತ್ತು Sunday ಅಲ್ವೇನ್ರೀ “. ಗಡಿಬಿಡಿಯಲ್ಲಿ ಅವಳ room ಇಗೆ ಹೋಗಿ ನೋಡ್ತಾರೆ, ಒಂದು ಪತ್ರ. “Thanks for the ಮನೆಹಾಳ್ idea” !!!

Anda Pinda Bramhaanda Part 5- Timmappa Consultancy Services


ನಮ್ಮ ಮನೆಯಲ್ಲಿ ನನ್ನನ್ನು ಬ್ರಾಹ್ಮೀ ಮಹೂರ್ತ ದಲ್ಲಿ ಎಬ್ಬಿಸುವುದಕ್ಕೆ ಕಳೆದ ೨೫ ವರ್ಷಗಳಿಂದ ಅವಿರತ ಪ್ರಯತ್ನ ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಅದು ಎಷ್ಟು ತಾರಕಕ್ಕೇರಿತ್ತೆಂದರೆ ನನ್ನನ್ನು almost ಮದುವೆ ಅನ್ನುವ ಖೆಡ್ಡದಲ್ಲಿ ತಳ್ಳಿ ಮಜ ನೋಡುವುದಕ್ಕೂ ನನ್ನ ಮನೆಯವರು ಮುಂದಾಗಿದ್ದರು. ಅವರ ಪ್ರಕಾರ ” ಮದುವೆ ಆದರೆ ಜವಾಬ್ದಾರಿ ಬಂದು ನಿದ್ದೆ ಕಮ್ಮಿ ಆಗುತ್ತೆ” ಅಂತ ಆದರೆ, ನನ್ನ version, ” ಮದುವೆ ಆದರೆ ತಲೆಕೆಟ್ಟು ನಿದ್ದೆ ಬರುವುದಿಲ್ಲ, ಇನ್ನು ಎಚ್ಚರ ಎಲ್ಲಿಂದ ಆಗುವುದು” ಅಂತ. ಅಬ್ಬಬ್ಬ ಎಂಥ ಕೆಟ್ಟ ಕನಸು ಅದು! ಈ ಮಧ್ಯೆ ನನಗೆ ಆದ ಪರಿಚಯ ಪೂರ್ಣಾನಂದ ಗುರುಜಿಯದ್ದು. ಅವರ ಹೆಸರಿಗೆ ತಕ್ಕನಾಗಿ ಅವರು ಪೂರ್ಣ ವಾಗಿದ್ದರು. square ಮುಖ ಇದ್ದ ಅವರ ಗಾತ್ರವೂ full square. ಕುರ್ಚಿಯಲ್ಲಿ ಕೂತರೆ ನಮ್ಮ ಪೂರ್ಣಾನಂದರದು square ಎಲ್ಲಾ ಸೇರಿ cube ಆಕಾರ. ಅದಿಕ್ಕೆ ನಾನು ಅವರನ್ನು ನಿಂತಾಗ ಪೂರ್ಣಾನಂದ2 ಅಂತಲೂ ಕೂತಾಗ ಪೂರ್ಣಾನಂದ3 ಅಂತಲೂ ಮನಸಿನಲ್ಲಿ ಹಾಸ್ಯ ಮಾಡಿದ್ದುಂಟು.
ನನ್ನನ್ನು ನಮ್ಮ ಮನೆಯವರು ಯಾರೊ ಮಾಟ ಮಡಿಸಿರಬೇಕೆಂದು ಪೂರ್ಣಾನಂದರ ಬಳಿ ಕಳುಹಿಸಿದ್ದರು. ” ಇವನು ಯಾವಾಗಲೂ ನಿದ್ದೆ ಮಾಡುತ್ತಾನೆ, ಏನಾದರು ಮಾಡಿ ಗುರುಜಿ”. ಅದಕ್ಕೆ ನಮ್ಮ ಗುರುಜಿ, ” ಅಷ್ಟೆ ತಾನೆ, ದಿನಾ ಬೆಳಿಗ್ಗೆ ೫ ಘಂಟೆಗೆ ಸರಿಯಾಗಿ ಇವನು ಶವಾಸನ ಮಾಡಿದರೆ ಸರಿಹೋಗತ್ತೆ ಅಂದರು” ನಾನು ಬಯಸಿದ್ದೂ ಹಾಲೂ ಅನ್ನ, ಆ illogical ಸ್ವಾಮಿಜಿ ಹೇಳಿದ್ದೂ ಹಾಲು ಅನ್ನ ! ಆಗ ನನಗೆ ಹೊಳಿದದ್ದು, ಅಷ್ಟು ದೊಡ್ಡ I.T park ನಲ್ಲಿದ್ದರೂ ಈ square ಸ್ವಾಮಿಜಿಯ ವ್ಯಾಪಾರ dull ಅಂತ. ಸರಿ ಇವರು ನನ್ನ ಜೀವನ ಏನು ಸರಿ ಮಾಡದು? ನಾನೆ ಇವರ ಭಾಗ್ಯ ಬದಲಾಯಿಸಬೇಕು ಹಾಗೆ ಸ್ವಲ್ಪ ಮಜಾನೂ ತೊಗೊಬಹುದು ಅಂತ ಅವರನ್ನು ಕೇಳಿಯೇಬಿಟ್ಟೆ ” ನೋಡಿ ಗುರುಜಿ, ನೀವು ಒಪ್ಪೋದಾದ್ರೆ, ನಿಮ್ಮ ವ್ಯಾಪಾರ full swing ನಲ್ಲಿ ಓಡೋಹಾಗೆ ಮಾಡ್ತೀನಿ”. ಗುರುಜಿಯ ಮುಖ ಅರಳಿದ್ದು, ಇವತ್ತಿಗೂ ಬಾಡಿಲ್ಲ.
ತಿರುಪತಿ ತಿಮ್ಮಪ್ಪನ ದರ್ಶನ ಅಂದ್ರೆ ನಿಜವಾಗಲೂ ಸ್ವರ್ಗಕ್ಕೆ ಹೋದಹಾಗೆ! ದಿನಗಳ/ವಾರಗಳ ಗಟ್ಟಲೇ ಕಾದರೂ ದರ್ಶನ ಸಿಗುವುದು ಕಷ್ಟ, ಹಲವರಿಗೆ ದರ್ಶನಕ್ಕೇ ನಾಮವಾಗುತ್ತದೆ. ಆದರೆ ಅಲ್ಲಿಯ law ನಲ್ಲೂ ಒಂದು loophole ಕಂಡುಹಿಡಿದ ನಾನು ಪ್ರಚಂಡನೇ ಸರಿ. ಪಾಪ ತಿರುಪತಿಯ ನಿರ್ವಾಹಕರು, atleast ” Senior Citizens” ಮತ್ತೆ ” Physically disabled” ಜನಕ್ಕೆ ನಾಮ ಬೀಳಬಾರದು ಅಂತ ಅವರಿಗೆ ನಮ್ಮ “railway platform” ನಲ್ಲಿ ಕೊಡೊಹಾಗೆ, “Special entrence” ಇಟ್ಟಿದ್ದಾರೆ. ಎಷ್ಟೇ ಆದರೂ ತಿಮ್ಮಪ್ಪನ ನಾಮವೂ railway track ಥರ parallel ಅಲ್ಲವೇ? ಸರಿ ಪಾಪ ಅವರು ಏನೋ ಜನಕ್ಕೆ ಒಳ್ಳೇದಾಗಲಿ ಅಂತ ಹೀಗೆ ಮಾಡಿದರೆ, ನಮ್ಮಂತಹ ಫಟೀಂಗರು ಅದನ್ನ ಒಂದು “Buisiness” ಆಗೆ ಪರಿವರ್ತಿಸಿಬಿಡುತ್ತೇವೆ. ಕೊಟ್ಟೆ ನೋಡಿ ಗುರುಜಿಗೆ ಒಂದು ” Amazing Idea”! ತಿರುಪತಿಯೇ ತಲೆಕೆಡಿಸಿಕೊಂಡುಬಿಟ್ಟಿತು.
“TCS” ಪಕ್ಕಾನೇ ” Timmappa Consultancy Services” ಶುರುವಾಗೇಬಿಟ್ಟಿತು. ತಿರುಪತಿಯ ಚೊಂಬೇ ಅದರ “Logo”, ನಾಮವೇ ಅದರ “Motto”. ಅಯ್ಯೊ ಯಾಕೆ ಹೇಳ್ತೀರ ಜನರ ನೂಕು ನುಗ್ಗಲಾಟವನ್ನು? ಇಲ್ಲೇ ಒಂದು ತಿರುಪತಿ Q ಶುರು ಆಗಿಬಿಟ್ಟಿತು. ಗುರುಜಿ ನನ್ನನ್ನು ಅವರ sle… ಅಲ್ಲ ಅಲ್ಲ ಅವರ company ಯ sleeping partner ಮಾಡಿಕೊಂಡರು. ಅಲ್ಲಿ ವಯಸ್ಸಾಗದವರಿಗೆ ವಯಸ್ಸಾಗಿದ್ದ ಹಾಗೆ, and ಎಲ್ಲಾ ಸರಿಯಾಗಿದ್ದವರಿಗೆ ಕೈ ಕಾಲು ಮುರಿದ ಹಾಗೆ training ನಡಿಯಲು ಶುರುವಾಗಿತ್ತು. ಇಲ್ಲಿಂದ training ಮುಗಿಸಿದ ಭಕ್ತಾದಿಗಳು ಈ skills ಅನ್ನು, ತೀರ BMTC ಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆಲ್ಲಾ ಉಪಯೋಗಿಸಲು ಶುರು ಮಾಡಿಬಿಟ್ಟಿದ್ದರು. ಎಲ್ಲಿ ನೋಡಿದರೂ ” ಗುರುಜಿ trained ಭಕ್ತಾದಿ” ಗಳದ್ದೇ ರಾಜ್ಯ. ಈ Idea ಕೊಟ್ಟ ನನಗೆ ಹಾಗು ಗುರುಜಿಗೆ ತಿರುಪತಿಯಲ್ಲೇ ಭಕ್ತ ಮಂಡಳಿಯಿಂದ ಸನ್ಮಾನವೂ ನಡೆದು ಹೋಯಿತು. ಕಾಲ ಕಳೆದ ಹಾಗೆ ಗುರುಜಿ ತಿರುಪತಿ ಲಾಡು ಮಾರಲೂ ಶುರು ಮಾಡಿದ್ದರು. ಅಲ್ಲದೇ Training ಇಷ್ಟವಿಲ್ಲದವರಿಗೆ ” Direct Entry” scheme ಕೂಡ ಶುರು ಆಯಿತು. ” Disabled” ಅಂತ ಹೋಗುತ್ತಿದ್ದವರ ಜೊತೆ “Helper” ಅಂತ ಇವರನ್ನು ಕಳುಹಿಸಿಬಿಡುವುದೇ ಅದರ ಮರ್ಮ.
ಈ ಗುರುಜಿಯ ಸಾಹಸ ಕಡೆಗೆ ತಿರುಪತಿ ತಿಮ್ಮಪ್ಪನ ಕಿವಿಗೂ ಕೇಳಿಸಿರಬೇಕು. ಅಲ್ಲಿ ಗುರುಜಿಯ “Trainees” ಸಿಕ್ಕಿಹಾಕಿಕೊಂಡರು, ಇಲ್ಲಿ ಗುರುಜಿಯ ಲಾಡು ಅಸಲಿನಲ್ಲಿ ಪಕ್ಕದ ಸುಬ್ಬಾ ಶೆಟ್ಟಿ ಹೋಟೆಲಿನದು ಅಂತ ತಿಳಿಯಿತು. ಸರಿ ಜನರ ದಂಡೇ ಅವರ “TiCS” ಮುಂದೆ ಪ್ರತ್ಯಕ್ಷ ಆಯಿತು. ಅಲ್ಲಿ ಅವರು ನೋಡಿದ್ದು ದೊಡ್ಡ A1 Size ನ ತಿರುಪತಿ ನಾಮದ Poster!!!

AnDa PinDa BramhaanDa Part4 – Section 377


ಈ ನಡುವೆ ನಮ್ಮ ಗುರುಜಿ ಬಹಳ Sophisticated ಆಗಕ್ಕೆ ಹೊರಟಿದ್ದರು. ಯಾವುದೊ soft skills ಕಾರ್ಯಕ್ರಮಕ್ಕೆ ಬೇರೆ ಸೇರ್ಕೊಂಡಿದ್ರು. ಯಾರಾದ್ರು ಕೇಳಿದ್ರೆ, “ ಏನು ಮಾಡಕ್ಕೆ ಆಗತ್ತೆ ಸ್ವಾಮಿ, World Is Flat” ಅನ್ನುತ್ತಿದ್ದರು. Friedman ಬರಿಯುವುದು ಇವಾಗ ಸಾರ್ಥಕ. ಅದು ಸಾಲದು ಅಂತ ಅವಾಗವಾಗ ಎಲ್ಲರ ಕಣ್ಣು ತಪ್ಪಿಸಿ ಒಂದೆರಡು English ಚಲನಚಿತ್ರಗಳಿಗೂ ಹೋಗಲು ಶುರು ಮಾಡಿದ್ದರು. “ ಯಾಕ್ರಿ ನಿಮ್ಗಿದೆಲ್ಲಾ? “ ಅಂತ ಯಾರಾದರು ಕೇಳಿದರೆ “Globalization, modernization” ಅಂತೆಲ್ಲ ಏನೇನೋ ಮಣಮಣಿಸಿ ಮುಂದಿನ ಪ್ರಶ್ನೆ ಕೇಳುವ ಮುನ್ನ ಪಲಾಯನ ಮಾಡುತ್ತಿದ್ದರು.
ಇನ್ನೂ ಕೆಲವರು ಅಷ್ಟಕ್ಕೆ ಸುಮ್ಮನಿರದೆ, “ ಹಾಳಾಯಿತು!! ಅಲ್ರೀ ಗುರುಜಿ, ನೀವು ನಮ್ಮ ಸನಾತನ ಸಂಸ್ಕೃತಿ ಅಂತೆಲ್ಲಾ ತಿರುಗಾಡ್ತಿದ್ರಿ ಇವಾಗೇನ್ ಬಂದಿರೋದು?” ಅಂತಂದ್ರೆ, “ ಅಯ್ಯೋ ಯಾರು ಇಲ್ಲ ಅಂದಿದ್ದು? ಏನು ಮಾಹಾ ವ್ಯತ್ಯಾಸ ಇಲ್ಲ ಬಿಡಿ. ಅಬ್ಬಬ್ಬಾ ಅಂದ್ರೆ ಸೂರ್ಯ ಹೋಗಿ Sun ಆಗಿದೆ. ಚಂದ್ರಹೋಗಿ moon ಆಗಿದೆ. ಆಮೇಲೆ, ಮುಂಚೆ ಜಾತಕ ಬರೆದು ಕೊಡುತ್ತಿದ್ದೆ, ಇವಾಗ ಅದನ್ನೇ E-Mail ಮಾಡ್ತಿನಿ ಅಷ್ಟೆ. ಬೇಕಿದ್ರೆ www.guruji.com visit ಮಾಡಿ ಎಲ್ಲಾ ಗೊತ್ತಾಗತ್ತೆ!”. ಅಂತ ಹೇಳಿ ಜಾರಿಕೊಳ್ಳುತ್ತಿದ್ದರು.
ಇಷ್ಟಕ್ಕೆ ನಿಲ್ಲಿಸದೆ ಇತ್ತೀಚೆಗಷ್ಟೆ ಯಾವುದೋ X-Men ಅನ್ನೋ ಚಿತ್ರ ನೋಡಿದ್ದ ಗುರುಜಿ, ಅದರಲ್ಲಿ ಬರುವ ಯಾವನೊ ಬೋಡ ಗುಂಡನ ಹಾಗೆ ತಮ್ಮ ವೇಷ ಬೇರೆ ಬದಲಾಯಿಸಿಕೊಂಡಿದ್ದರು. ಅವರ ಪ್ರಕಾರ, ಅವನ ಹಾಗೆ ಅವರಿಗೂ ಬೇರೆಯವರ ಭವಿಷ್ಯ ತಿಳಿಸುವ X-gene ಇದೆಯಂತೆ. ಅದಕ್ಕೆ ತಮ್ಮ Astrology Centre ಅನ್ನು Xtrology Centre ಅಂತ ಬದಲಾಯಿಸಿಕೊಂಡಿದ್ದಾರ.ೆ
ಇಷ್ಟೆಲ್ಲಾ ಮಾಡಿದ ನಮ್ಮ ಗುರುಜಿಗೆ, ನಿಜವಾದ Globalization ಅಂದರೆ ಗೊತ್ತಾಗಿದ್ದೆ ಅವರ ಹೊಸಾ client ಒಬ್ಬನಿಂದ. ಆ ಪುಣ್ಯಾತ್ಮನೋ ಇವರನ್ನು ದೊಡ್ಡ ಶಂಕರಚಾರ್ಯರೇ ಅಂತ ಅಂದುಕೊಂಡಿದ್ದ. ಗುರುಜಿ ನಿಂತ್ಕೊ ಅಂದರೆ ನಿಂತ್ಕೊತಿನಿ, ಕೂತ್ಕೊ ಅಂದರೆ ಕೂತ್ಕೊತೀನಿ ಅಂತ ಹೇಳಿಕೊಳ್ಳುತ್ತಿದ್ದ ಮಹಾನುಭಾವ.ಯಾವಾಗಲೂ ಅವರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದ. ನಮ್ಮ ಗುರುಜಿಗೆ ಆಶ್ಚರ್ಯ!! ತನಗೆ ಅದೆಲ್ಲಿಂದ ಇಂಥ ಶಿಷ್ಯ ಸಿಗಕ್ಕೆ ಸಾಧ್ಯ ಅಂತ.
ಒಂದು ಬಾರಿ ನಮ್ಮ ಗುರುಜಿಯ ಶಿಷ್ಯ ಜೋರಾಗಿ ಗೋಳಾಡಿಕೊಂಡು ಗುರುಜಿಯ Xtrology Centre ಗೆ ಬಂದವನೆ ಅವರನ್ನು ತಬ್ಬಿಕೊಂಡು ಅಳತೊಡಗಿದ. ಮಹಾನ್ ಕರುಣಾಳುವಾದ ನಮ್ಮ ಗುರುಜಿ ಕೇಳಿದರು.”ನನಗೆ ಎಲ್ಲಾ ಗೊತ್ತಾಗುತ್ತದೆ, ಆದರೆ ನಿನ್ನ ಬಯಿಯಲ್ಲೇ ಕೇಳುವ ಆಸೆ. ಏನು ನಿನ್ನ ತೊಂದರೆ” ಅಂದರು. ಅದಕ್ಕೆ ಅವನು, “ ಗುರುಜಿ ನನಗೆ ಮದುವೆ ಆಗಿ ಆಗಲೇ ೩ ವರ್ಷ ಕಳೀತಾ ಬಂತು ಆದರೂ ನನಗೆ ಮಕ್ಕಳಾಗಿಲ್ಲ. ಏನು ಮಾಡೋದು? “ ಅಂದ. ಗುರುಜಿಗೆ ಆದ ಆನಂದ ಹೇಳತೀರದು. ಕಡೆಗೂ ಅವರಿಗೆ ತಮ್ಮ ಜ್ನಾನ ಬಂಡಾರ ತೆರೆಯಲು ಅವಕಾಶ ಸಿಕ್ಕಿತ್ತು. “ ಅಯ್ಯೋ ನಾನಿರುವಾಗ ಭಯ ಯಾಕೆ? ನೋಡು ದಿನಾ ಬೆಳಿಗ್ಗೆ ಎದ್ದ ಕೂಡಲೆ ಹಸುವಿನ ಗಂಜಲ ಸಗಣಿಗೆ ಸೇರಿಸಿ ತಿನ್ನು. ಹೀಗೆ ೬ ತಿಂಗಳು ಮಾಡು ನಿನಗೆ ಖಂಡಿತ ಮಗು ಆಗುವುದು. “ ೬ ತಿಂಗಳಲ್ಲಿ ಮಗುವೇ? ಇದು ಹೇಗೆ ಸಾಧ್ಯ ಒಂದು ೯ ತಿಂಗಳಾದರೂ ಬೇಡವೇ ಅಂತ ಕೇಳಿದ್ದಕ್ಕೆ, “ಅಯ್ಯೋ ಅನಿಷ್ಟ ಮುಂಡೇದೆ, ಹೇಳಿದ ಹಂಗೆ ಮಾಡು. ಅಲ್ಲೀ ವರೆಗು ನನಗೆ ಮುಖವೇ ತೋರಿಸಬೇಡ.” ಅಂತ ಅವನಿಗೆ ಷರತ್ತೇ ಹಾಕಿದರು.
೬ ತಿಂಗಳಾದದ್ದೇ ತಿಳಿಯಲಿಲ್ಲ. ಗುರುಜಿಯು ಶಿಷ್ಯನ ಮುಖವೇ ಕಂಡಿರಲಿಲ್ಲ. ಅವನ number, phone ನಲ್ಲಿ ಕಂಡಾಗಲೆ ಗುರುಜಿಗೆ ಅವನ ಹಾಗು ಅವನಿಗೆ ಹಾಕಿದ್ದ ಷರತ್ತಿನ ನೆನಪಾಗಿದ್ದು. ಅವರು ಗೆದ್ದಿರುವುದರಲ್ಲಿ ಸಂಶಯವೇ ಇರಲಿಲ್ಲ. “ ಹೂ ಹೇಳಪ್ಪ ಏನ್ ವಿಶೇಷ?” ಅಂತ ಕೇಳಿದೊಡನೆಯೇ ಅವನ ಉತ್ತರ, “ ಗುರುಜಿ, ಮಗು ಆಗುವುದಿರಲಿ, ಆಗುವ ಲಕ್ಷಣವೂ ಇಲ್ಲ”. ಗುರುಜಿಗೆ ಆಶ್ಚರ್ಯ. ತಾನು ಏನಾದರೂ ಲೆಖ್ಖ ಹಾಕುವುದರಲ್ಲಿ ತಪ್ಪಾಗಿದೆಯ ಅಂತ. “ಹೌದಾ ಹಿಂಗಾಗಕ್ಕೆ ಸಾಧ್ಯವೇ ಇಲ್ಲ. ಎಲ್ಲಿ ನಿನ್ನ ಹೆಂಡತಿಯ ನಕ್ಶತ್ರ, ರಾಶಿ ಮತ್ತೆ ಹೇಳು? ಅಂದ ಹಾಗೆ ಅವಳ ಹೆಸರು?” ಅಂತ ಕೇಳಿದರು.
ಅದಕ್ಕೆ ಅವರಿಗೆ ಸಿಕ್ಕ ಉತ್ತರ ಕೇಳಿ, ಗೋಮೂತ್ರದಲ್ಲಿ ಗುರುಜಿಯೇ ಸ್ನಾನ ಮಾಡುವ ಹಾಗಾಯಿತು. ಶಿಷ್ಯನ ಉತ್ತರ “ ರೋಹಿಣಿ ನಕ್ಷತ್ರ, ಕನ್ಯಾ ರಾಶಿ. ಹೆಸರು “Rohit“.

Anda Pinda Bramhanda 3- Arranged Love Marriage


ವಿಖ್ಯಾತ I.T ಪಾರ್ಕ್ನಲ್ಲಿ ಅಂಗಡಿ ಶುರು ಮಾಡಿ ತಿಂಗಳು  ಆಯಿತುನಮ್ಮ ಗುರುಜಿಯಜ್ಯೋತಿಷ್ಯಾಲಯಕ್ಕೆ ಮನುಷ್ಯರಿರಲಿಒಂದು ಸೊಳ್ಳೆಯೂ ಬಂದಿರಲಿಲ್ಲ.” ಅಲ್ರೀ ಗುರುಜಿ I.T company ಗಳ ಮುಂದೆ ಕನ್ನಡದಲ್ಲಿ board ನೇತುಹಾಕಿದ್ರೆ ನೊಣ ಹೊಡಿದೆ ಇನ್ನೇನ್ ಮಾಡ್ತೀರ?ಮೊದ್ಲು ಒಂದು English board ನೇತುಹಾಕ್ರಿ.” ಅಂತ ಮೊನ್ನೆ ಯಾರೊ ತಲೆಹರಟೆ ಬಾಯಿಬಡಿದಿದ್ದರಿಂದ ಅದನ್ನೂ ಮಾಡಿಸಿಯಾಗಿತ್ತು ನಮ್ಮ ಗುರುಜಿಕಡೆಗೆ ತಮ್ಮ Consultancy feeಯನ್ನು ೫೦೦ ರುಪಾಯಿಗಳಿಂದ ೧೦೦ ರುಪಾಯಿಗಳಿಗೆ ಇಳಿಸಿಯೂ ಆಗಿತ್ತುಸಾಲದು ಅಂತinternet, blog, sms ಹಿಂಗೆಲ್ಲಾ publicitಕೂಡ ಆಯಿತುಇನ್ನೇನು ಮಾಡಲೂ ತೋಚಲಿಲ್ಲನಮ್ಮ ಗುರುಜಿಗೆತಮ್ಮ ಜಾತಕ ನೋಡಿಕೊಳ್ಳೋಣ ಅಂದರೆ ಅವರ ಮೇಲೆ ಅವರಿಗೇನಂಬಿಕೆಯಿಲ್ಲಬೇರೆಯವರ ಹತ್ತಿರ ಕೊಟ್ಟು ಕೇಳೊಣ ಅಂದರೆ ಅವಮಾನದ ಹೆದರಿಕೆಹೀಗೇ ತಿಂಗಳು ಕಾಕಾ ಅಂಗಡಿಯ ಹಾಗೆ ವ್ಯಾಪಾರವೇ ಇಲ್ಲದೆ ಸುಮ್ನೆ ಬಸವನ ಹಾಗೆ ತಮ್ಮ ಗ್ರಹಗಳನ್ನಬೈಕೊಂಡು ಕೂತಿದ್ರು ನಮ್ಮ ಗುರುಜಿಗಳು. ”  ದರಿದ್ರ I.T ನೋರಿಗೆ ದೇವ್ರ ಮೇಲೆ ನಂಬಿಕೇನೇ ಇಲ್ಲ ಹಾಳಾದ ನಾಸ್ತಿಕರುಕಲಿಯುಗಕಲಿಯುಗಅಂತ ನಮ್ಮ ಗುರುಜಿ ಯಾರದ್ರು ವ್ಯಾಪಾರದ ಬಗ್ಗೆ ಕೇಳಿದರೆ ಶಿಡುಕು ಮೂತಿ ಹಾಕಿ ಗೊಣಗುತ್ತಿದ್ದರು.
ಅವತ್ತು ಅದ್ಯಾವ ನರಿ ಮುಖ ನೋಡಿದ್ದರೋ ಏನೋಬೆಳಿಗ್ಗೆ ತಮ್ಮ Astrology office ಬಾಗಿಲು ತೆಗೆಯೋಕೆ ಮುಂಚೆಯೇ ಬೀದಿ ಪೂರ್ತಿ ಜನ. “ಜನಮರುಳೋ ಜಾತ್ರೆ ಮರುಳೊ” ಅಂತಾರಲ್ಲಹಂಗೆ ನಮ್ಮ ಗುರುಜಿ ಬಂದದ್ದೇ ತಡಎಲ್ರೂ ಅವರ ಕಾಲಿಗೇ ಬಿದ್ದುಬಿಡೋದೇಗುರುಜಿಗೆ ೨ನಿಮಿಷ ಏನೂತೋಚಲೇ ಇಲ್ಲಜೀವನದಲ್ಲೇ ಇಷ್ಟು ಜನ ಅವರ ಕಾಲಿಗೆ ಬಿದ್ದದ್ದೇ ಇಲ್ಲಗುರುಜಿ ಸರಿಯಾಗಿ ನೋದುತ್ತಾರೆಇಡೀ ಮನೆತನವೇ ಪ್ರತ್ಯಕ್ಷ ಆಗಿದೆ!ಒಹೋಒಳ್ಳೇ ಭಾರೀ ಕುಳವೇ ಸಿಕ್ತು ಅಂತ ನಮ್ಮ ಗುರುಜಿತಮ್ಮ ಬಗ್ಗೆ ಹೊಗಳಿಕೊಂಡಿದ್ದೋ ಹೊಗಳಿಕೊಂಡಿದ್ದು. ” ರೀಮೊನ್ನೆ ISRO ನೌರುಆಕಾಶಕ್ಕೆ ಬಿಟ್ರಲ್ಲ, INSAT ಉಪಗ್ರಹಅದಕ್ಕೆ ನಾನೆ ಮಹೂರ್ಥ ಹಾಕಿ ಕೊಟ್ಟದ್ದುಇವತ್ತು ನೋಡಿ ಹೆಂಗೆ ಓಡ್ತಿದೆ ಅಂತ!! ಅದ್ಯಾವ್ದೊ ಚಂದ್ರಯಾಣಅಂತೆನಾನು ಹೇಳಿದ್ದೆ ಅದನ್ನ ಇವಾಗಲೆ ಬಿಟ್ಬಿಡ್ಬೇಡಿಅದಕ್ಕೆ ಗುರುಬಲ ಇಲ್ಲ ಅಂತಇವಾಗ ಅದು ಕೆಟ್ಟು ಕೂತಿದೆಯಂತೆ.ನೋಡಿದ್ರಾ ಜ್ಯೋತಿಷ್ಯದಮಹಾತ್ಮೆ? ” ಅವರಲ್ಲಿ ಇದ್ದ ಒಬ್ಬ ೨೫-೨೬ ವಯಸ್ಸಿನ ಹುಡುಗ ತಕ್ಷಣವೇ, ” ಅಲ್ರೀ ಗುರುಜಿಅದೇನ್ ನಮ್ ಬೆಂಗಳೂರಿನ ಕಿತ್ತೋಗಿರ ಆಟೋನೇ?ನೀವ್ ಹೇಳ್ದಾಗೆಲ್ಲ ಶುರು ಮಾಡಿ ಬಿಟ್ ಬಿಡಕ್ಕೆ?” ಅಂತ ಅಂದ್ಬಿಟ್ಟಗುರುಜಿ ಏನ್ ಕಮ್ಮಿನ? ಅವರೂ ಶುರು ಮಾಡೇಬಿಟ್ರು, “ ಯಾರ್ರೀ ಇವ್ನು ತಲೆಹರಟೆ? ದೊಡ್ಡೋರು ಮಾತಾಡವಾಗ ಮಧ್ಯ ಬಾಯಿ ಹಾಕ್ತಾನೆ? ಏನಯ್ಯಾ ಯಾವ್ದಾದ್ರು I.T company ಯಲ್ಲ ಕೆಲ್ಸ ಮಾಡದು? ನಿಮ್ಮಂಥ ತಲೆಹರಟೆಗಳೆಲ್ಲ ಅಲ್ಲೇ ಇರದು. ಅಲ್ಲಿ ಜಾತಿ ಬದಲಾಯಿಸುತ್ತಾರಂತೆ ನಿಜಾನ? “ ಅಂತಎಲ್ಲ ಬೈದು ಸುಧಾರಿಸಿಕೊಂಡರು. ಅಲ್ಲ, I.T Company ಗಳಿಗೇನು ಬೇರೆ ಕೆಲಸ ಇರಲ್ವ? ಅದೇನು ನಮ್ ಸರ್ಕಾರವೇ ಹೀಗೆ ಏನೇನೋ ಕೆಲಸಕ್ಕೆ ಬರ್ದಿರೋದನ್ನ ಮಾಡಕ್ಕೆ?
ಸರಿ, ಹಿಂಗೆ ಒಂದಷ್ಟು ಮಾತಾಡಿ, ತನ್ನನ್ನು ತಾನೆ ಮತ್ತೆ ಹೊಗಳಿಕೊಂಡು ನಮ್ಮ ಗುರುಜಿ ವಿಷಯಕ್ಕೆ ಬಂದರು. “ ಹು, ಅದು ಸರಿ ಎಲ್ರು ಬಂದ ವಿಷಯ? ಯಾರ ಜಾತಕ ನೋಡ್ಬೇಕು? “ ಆಗ, ಗುಂಪಿನ ಒಬ್ಬರು ಅಜ್ಜಿ ಜಾತಕ ಕೊಟ್ಟು, ಆ ತಲೆ ಹರಟೆ ಹುಡುಗನ ಕಡೆ ತೋರಿಸಿ “ ಇವನಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದೇವೆ.ಹುಡುಗಿಯ ಜಾತಕ ಕೂಡ ತಂದಿದ್ದೇವೆ. ಹೊಂದುವುದ ನೋಡಿ ಹೇಳಿ, “ ಅಂದು ತಮ್ಮ ಹಲ್ಲಿಲ್ಲದ ಬೊಚ್ಚುಬಾಯಿಯಿಂದಲೇ ನಕ್ಕರು. ಅಹಾ ಸಿಕ್ದ ಕೊನೇಗೂ ಕಳ್ಳ ಕೊರಮ. ಸೇಡ್ ತೀರಿಸ್ಕೋತೀನಿ ಇವಾಗ ಅಂತ ಅಂದುಕೊಂಡು ಗುರುಜಿ ಜಾತಕ ನೋಡಿದರು, “ ಅಯ್ಯೋ, ಅಯ್ಯೋ, ಈ ಜಾತಕದಲ್ಲಿ ಚಂದ್ರ ಗ್ರಹ ೭ನೇ ಮನೆಯಲ್ಲಿದೆ, ಸೂರ್ಯ ಗ್ರಹ ೧ ಮನೆಯಲ್ಲಿ ಅದಕ್ಕೆ ಕಾಟ ಕೊಡ್ತಿದೆ! ಬಹಳ ಅಪಾಯ” ಅಂತ ಪಾಪ ಆ ಹುಡುಗನ ಭವಿಷ್ಯ ನುಡಿದೇಬಿಟ್ಟರು. ಆ ಹುಡುಗ ಸುಮ್ಮನಿರಲಾರದೆ ತಕ್ಷಣ, “ ಅಲ್ರೀ ಗುರುಜಿ, ಏನ್ ಹೇಳ್ತಿದಿರ್ರೀ? ಚಂದ್ರ ಗ್ರಹ ಅಲ್ಲ, ಉಪಗ್ರಹ. ಸೂರ್ಯ ನಕ್ಷತ್ರ. ನಿಮ್ಗೆ ಇದು ಗೊತ್ತಿಲ್ವ? ಮೂರನೆ ಕ್ಲಾಸ್ ಮಗೂಗು ಗೊತ್ತಲ್ರೀ ಇದು” ಅಂತ ನಕ್ಕೇಬಿಟ್ಟ. ಪಾಪ ಅವನ ಅಜ್ಜಿ, ಅವನಿಗೆ ಸುಮ್ಮನಿರಲು ಕೈಯಲ್ಲೇ ಸನ್ನೆ ಮಾಡಿ ಸುಮ್ಮನಾದರು. ಗುರುಜಿ ಬಿಡಬೇಕಲ್ಲ “ ಹೋ ನೋಡಿ ಇದೇ ಕಲಿಯುಗ. ನಮ್ಮ ಸಂಸ್ಕ್ರುತಿ ಸಂಸ್ಕಾರಗಳಲ್ಲಿ ನಂಬಿಕೇನೇ ಇಲ್ಲ ಈ ಮುಂಡೇವಕ್ಕೆ” ಅಂತ ಗೊಣಗಿದರು. ಸರಿ ಇನ್ನು ಹೆಚ್ಚು ವಾದ ಮಾಡಿದರೆ ಬರೋ ದುಡ್ದಿಗೂ ಕಲ್ಲು ಅಂತ ಅಂದುಕೊಂಡು ೧೦ ನಿಮಿಷ ಜಾತಕ ನೋಡುವ ನೆಪ ಮಾಡಿದರು. ಏನೋ ದೀರ್ಘವಾಗಿ ಯೋಚಿಸಿ, ಲೆಖ್ಖ ಹಾಕಿ, ಗುಣಾಕಾರ ಭಾಗಾಕಾರ ಹಾಕಿ ಭವಿಷ್ಯ ನುಡಿದೇಬಿಟ್ಟರು. “ ಈ ಹುಡುಗನ ಜೊತೆ ಆ ಹುಡುಗಿಯ ಮದುವೇ ಸಾಧ್ಯವೇ ಇಲ್ಲ, ಜಾತಕಗಳು ಚೂರೂ ಹೊಂದೋದಿಲ್ಲ. ಹಾಗು ಒಂದುವೇಳೆ ಮದುವೆ ಮಾಡಿದರೆ, Divorce ಖಂಡಿತ”.
ಮನೆಗೆ ಎಲ್ಲರೂ ವಾಪಸ್ ಬಂದರು. ಎಲ್ಲರಲ್ಲೂ ಆತಂಕ, ಮನೆಯವರೆಲ್ಲ ಯೋಚನೆಯಲ್ಲಿ ಮುಳುಗಿದ್ದಾರೆ. ಅದು ಹುಡುಗ ಪ್ರೀತಿಸಿದ ಹುಡುಗಿಯ ಜಾತಕ. ಪಾಪ ಏನೂ ತೋಚದೆ ಅಳುತ್ತಿದ್ದಾನೆ. ಮನೆ ಪೂರ್ತಿ ಮೌನ, ಯಾರಿಗು ಏನು ಮಾತನಾಡಬೇಕೆಂಬುದು ತೋಚುತ್ತಿಲ್ಲ. ಅಷ್ಟರಲ್ಲಿ ಅಜ್ಜಿಯ mobile ಹೊಡೆದುಕೊಳ್ಳಲು ಶುರು ಮಾಡಿತು. ನೋಡಿದರೆ ಗುರುಜಿಯ ಕರೆ. ಆಶ್ಚರ್ಯ ದಲ್ಲಿ mobile ಕಿವಿಗಿಟ್ಟರೆ ಅಲ್ಲಿಂದ ಗುರುಜಿ, “ ನೋಡಿ, ಇನ್ನು ೧೦೦ ರುಪಾಯಿ ಕೊಟ್ಟರೆ ಹುಡುಗಿಯ ಜಾತಕ ಹೊಂದುವ ಹಾಗ ನಿಮ್ಮ ಹುಡುಗನ ಜಾತಕೆ ಬದಲಾಯಿಸಿ ಕೊಟ್ಟುಬಿಡುತ್ತೇನೆ.” ಅಂದಿದ್ದರು!!!