Sunday, March 25, 2012

ಪುಣ್ಯಕೋಟಿಯ ಕರು


ಹುಲಿಗೆ ಮಾತು ಕೊಟ್ಟು
ಅದನಲ್ಲೆ ಕಾಯಲು ಬಿಟ್ಟು
ಕರುವನು ಕೊನೆಯ ಬಾರಿ
ಕಾಣಲು ಪುಣ್ಯಕೋಟಿ ಮನೆಗೆ ಬಂತು

ಬಿಸಿಲಿಗೆ ಸೋತಾ ವದನ
ದುಗುಡದಿ ಬತ್ತಾ ಕಣ್ಣು
ಸತ್ಯವ ನುಡಿಯದಾ ಬಾಯಿ
ಕರುವನು ಪುಣ್ಯಕೋಟಿ ನೋಡಿತು ನಿಂತು

ಅಮ್ಮ ಬಂದ ಖುಷಿಗೆ
ಕಂದ ಮೇಲಕೆ ಜಿಗಿದು
ಹಾಲನು ಬೇಡುತ ಓಡಿ
ಪುಣ್ಯಕೋಟಿಯ ಕರುವು ಎಗರುತ ಬಂತು

ಕೆಚ್ಚಲಲಿ ಹಾಲೆ ಇಲ್ಲ
ಅಮ್ಮನು ಕಾಯಲೆ ಇಲ್ಲ
ಮಗುವನು ಒಮ್ಮೆಗೆ ಸವರಿ
ಸುಮ್ಮನೆ ಅತ್ತಳು ಪುಣ್ಯಕೋಟಿ ಮತ್ತೆ ಹೊರಟು ನಿಂತು

ಕರುವಿಗೆ ಆಗದು ಅರ್ಥ
ತನ್ನ ಸಮಾಧಾನವಾಗಿದೆ ವ್ಯರ್ಥ
ಅಮ್ಮ ತಿರುಗಿ ಹೊರಟಿರುವುದಕೆ
ಪುಣ್ಯಕೋಟಿಯ ಕರುವಿಗೆ ಅಳುವೇ ಬಂತು

ಹುಲ್ಲು ಖಾಲಿಯಿರಬಹುದು
ಆದರೆ ತನ್ನ ತಪ್ಪಲ್ಲವದು
ಬಂದೊಡನೆ ಅಮ್ಮ ಸಂಜೆ
ಹೇಳಬೇಕೆಂದು ಕೊಂಡು ಕರುವು ಕಾಯಿತು ಬಾಗಿಲ ಬಳಿಯೇ ನಿಂತು

No comments: