Showing posts with label nothingness. Show all posts
Showing posts with label nothingness. Show all posts

Wednesday, January 1, 2020

ಶೂನ್ಯ

೨೦ ಶತಮಾನಗಳ ಹಿಂದೆ ಶುರುವಾಯಿತೊಂದು ಶೂನ್ಯ
ಗೆಲಿಲಿಯೊ ಪುಣ್ಯಾತ್ಮ ಭೂಮಿಯೇ ಶೂನ್ಯವೆಂದು ತೋರಿಸಿದ
ಡಾರ್ವಿನನು ಜೀವನದ ರಹಸ್ಯವನೆ ಬಿಡಿಸಿಬಿಟ್ಟ
ನಾನೇನು ಸುಮ್ಮನಿರಲಿಲ್ಲ ಯೋಚಿಸಿದೆ ಪ್ರಸ್ತಾಪಿಸಿದೆ ವಾದಿಸಿದೆ
ಅದು ಸತ್ಯ ಇದು ಸತ್ಯ, ಅದು ಸರಿ ಇದು ತಪ್ಪೆಂದು ವಿವರಿಸಿದೆ

ಮಾರ್ಕ್ಸ್ ಗಾಂಧಿ ನನ್ನ ಕಲ್ಪನೆಯನ್ನೇ ಬದಲಾಯಿಸಿದರೆ ಹಿಟ್ಲರ್
ಸ್ಟಾಲಿನ್ನರನ್ನ ಕಂಡು ಭೂಮಿಯ ಮೇಲಿರುವುದೂ ಶೂನ್ಯವೆಂದರಿತೆ
ಶೂನ್ಯದಿಂದ ಮತ್ತೆ ನಾ ಹುಟ್ಟಿ ನನ್ನ ಜಗತ್ತನ್ನೂ ವಿಸ್ತರಿಸಿದೆ
ಮನೆ ಊರು ಪಟ್ಟಣ ಮಹಾನಗರಗಳ ಸರಮಾಲೆ ಬೆಳೆಸಿದೆ
ಸಾಲದೆ ಒಂದು ಕಟ್ಟಡದ ಮೇಲಿನ್ನೊಂದನ್ನು ಕಟ್ಟಿ ಆಗಸವನೆ ಮುಟ್ಟಿದೆ

ಕಡೆಗೆ ಕಾಡು ಪ್ರಕೃತಿಯೆಂದು ಪ್ರಾಣಿಗಳ ಪ್ರೀತಿಸಿದೆ, ಸಂಹರಿಸಿದೆ,
ಪ್ರಕೃತಿಗಿಂತ ದೊಡ್ಡವನಾಗಿ ಅದನ್ನೆ ಸಾಯಿಸಿ ಬದುಕಿಸಲು ಹೋದೆ
ಸಾವೇ ಸುಳಿಯಬಾರದೆಂದು ಔಷದಿಗಳನು ಅರಿದು ಸವಾಲೆಸೆದೆ
ಸಮಯವನ್ನೇ ತಿರುಚುವ ವಿಮಾನ ಮಾಡಿ ಹಾರಿದೆ ಹಣ,ದೇಶ,ಭಾಷೆ,
ದೇವರನ್ನು ಸೃಷ್ಟಿಸಿ ಶೂನ್ಯಕ್ಕೆ ಇನ್ನೂ ಶೂನ್ಯಗಳನ್ನು ಪೋಣಿಸಿದೆ

ಅಲ್ಲಿಗೆ ನಿಲ್ಲದೆ ಅಪ್ಪ ಅಮ್ಮ ಹೆಂಡತಿ ಮಕ್ಕಳಿಗಾಗಿ ಪಾಠ ಕಲಿತು
ಕೆಲಸ ಮಾಡಿ ಗಿಡ ಬೆಳೆಸಿ ಮರ ಮಾಡಿ ಬೆವರಿಳಿಸಿ ಬಸವಳಿದು
ಸುಸ್ತಾಗಿ ಸೊರಗಿ ಮತ್ತೆ ಮತ್ತೆ ಶೂನ್ಯವನ್ನೇ ಕಂಡೆ,
ಅದನ್ನು ಕಂಡು ಹಿಡಿದೆ ಎಂದು ಬೀಗಿ ಖುಷಿಯಲ್ಲಿ ಚೀರಿದೆ ಅಷ್ಟರಲ್ಲಿ
ಪಕ್ಕದವ ಚಿವುಟಿ ಹೇಳಿದ, ನೀನು ಶೂನ್ಯದಲ್ಲಿನ ಶೂನ್ಯತ್ವವನ್ನೇ ಮರೆತೆ!