Wednesday, October 12, 2011

Serial Killer!!


“ಪಕ್ಕದ ಮನೆ ಅಜ್ಜಿ ಮೆಟ್ಟಲಿನಿಂದ ಕಾಲು ಜಾರಿ ಬಿದ್ದು ಸತ್ತೇಹೋದರಂತೆ.” ಈ ಮಾತುಗಳು ಕೇಳಿದ ತಕ್ಶಣ ಇನ್ನೇನು ಮೊದಲನೆ ತುತ್ತು ತಿನ್ನಲು ಹೊರಟಿದ್ದ ನಾನು ಆದ ಆಘಾತಕ್ಕೆ ಕೈಯಿಂದ ಅನ್ನ ವಾಪಸ್ಸು ತಟ್ಟೆಗೆ ಚೆಲ್ಲಿದೆ. ಅಂದು ನಮ್ಮ ಮನೆಯಲ್ಲಿ ನನ್ನ ಮುತ್ತಜ್ಜಿಯ ತಿಥಿ. ಆದ್ಧರಿಂದ ನಮ್ಮ ಮನೆಯಲ್ಲಿ ಜನರೋ ಜನ. ನಮ್ಮಮ್ಮನಿಗೆ ನನ್ನ ಅತ್ತೆ ಮನೆಗೆ ಬಂದರೆಂಬ ಸಂಭ್ರಮ ಬೇರೆ. ನನಗೆ ಊಟ ಬಡಿಸುವಾಗ ಇಬ್ಬರೂ ತುಂಬ ಗಂಭೀರವಾಗಿ ಅಜ್ಜಿಯ ವಿಷಯ ಚರ್ಚಿಸುತ್ತಿದ್ದರು. ನನಗೂ ಆಜ್ಜಿಯನ್ನು ನೆನೆದು ಅಯ್ಯೋ ಅನ್ನಿಸಿತ್ತು. ನನ್ನನ್ನು ಚಿಕ್ಕ ವಯಸ್ಸಿಂದ ಎತ್ತಿ ಆಡಿಸಿದ್ದ ಅಜ್ಜಿ ಅವರು. ಏನೋ ನೆನಪಿಗೆ ಬಂದು, “ ಅವರು ಮಾಡಿಕೊಡುತ್ತಿದ್ದ ದೋಸೆ ಬಲು ರುಚಿಯಾಗಿರುತ್ತಿದ್ದವು ಅಂದುಬಿಟ್ಟೆ”. ಅಜ್ಜಿಯ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದ ಅಮ್ಮ ಹಾಗು ಅತ್ತೆ ಏನೂ ಅರ್ಥವಾಗದೆ ನನ್ನ ಕಡೆ ತಿರುಗಿ ನೋಡಿದರು. ಆವಾಗ ನಾನು, “ ಅದೆ ನೀವು ಮಾತಾಡಿಕೊಳ್ಳುತ್ತಿದ್ದರಲ್ಲ, ಪಕ್ಕದ ಮನೆ ಕೆಂಪಜ್ಜಿ ಅವರು ಹ್ಹುಯ್ಯುತ್ತಿದ್ದ ದೋಸೆ ತುಂಬ ರುಚಿ. ಪಾಪ ಅವರ ಸಾವಿನ ನಂತರ ಅವರ ಗಂಡನ ಗತಿ ಏನೋ? “ ಎಂದೆ. ಅದನ್ನು ಕೇಳಿ ಎಲ್ಲಾ ಅರ್ಥವಾದವರಂತೆ ಅಮ್ಮ ಹಾಗು ಅತ್ತೆ ಜೋರಾಗಿ ಗೊಳ್ ಎಂದು ನಗತೊಡಗಿದರು. ನನಗೆ ಸರಿಯಾಗಿ ಕೋಪ ಬಂತು. ಅಲ್ಲ, ಅಲ್ಲಿ ಪಾಪ ಕೆಂಪಜ್ಜಿ ಸತ್ತರೆ ಇವರಿಗೆ ನಗು ಬರುತ್ತಿದೆಯಲ್ಲ ಅಂತ. ಅಮ್ಮನಿಗೆ ಗದರಿಯೂಬಿಟ್ಟೆ, “ ಅಲ್ಲ ಇಂಥ ಸಮಯದಲ್ಲೂ ನಿಮಗೆ ನಗು ಬರುವುದೇ? “ ಎಂದು. ನಿಧಾನವಾಗಿ ಸುಧಾರಿಸಿಕೊಂಡು ಅತ್ತೆ ನನಗೆ ಸತ್ಯ ದರ್ಶನ ಮಾಡಿಸಿದರು, “ ಥು ದಡ್ಡ!!! ನಾವು ಯಾವುದೋ ದಾರಾವಾಹಿಯ ಕಥೆ ಚರ್ಚೆ ಮಾಡ್ತಿದೀವಿ. ಅಷ್ಟೂ ಅರ್ಥವಾಗಲ್ವ. ನಿನಗ್ಯಾಕೋ ಹೆಂಗಸರ ವಿಷಯ?” ಅಂತ ಅವಮಾನ ಮಾಡಿಬಿಡೋದೇ?
“ಸಾಕಪ್ಪಾ ಸಾಕು ಈ ಸೀರಿಯಲ್ ಸಹವಾಸ. ಅಲ್ಲ ರೀ ಅದ್ಯಾರು ಆ ಕೆಟ್ಟು ಮುಖದ ಕ್ರೈಂ ಸ್ಟೋರಿ ಶುರು ಮಾಡಿದ್ದು? ಅದನ್ನೇ ಅನುಕರಿಸಿ ನಮ್ಮನೆ ಚೋಟುದ್ದ ಮಕ್ಕಳು ಅವರು ಕೇಳಿದ್ದು ಕೊಡಿಸದಿದ್ದರೆ ನಮ್ಮನ್ನೇ ಬೈತಾರಲ್ರೀ!! ಸಾಕು ಸಾಕು ಈ “ ದಡ್ಡ ಪೆಟ್ಟಿಗೆಯ” ಸಹವಾಸ” ಅಂತ ನಮ್ಮ ಪಕ್ಕದ ಮನೆ ಪದ್ಮನಾಭಯ್ಯ ನನ್ನ ಮುಂದೇ ಗೋಳು ತೋಡಿಕೊಂಡಾಗಲಂತು ಅಯ್ಯೋ ಅನ್ನಿಸಿತು. ಇನ್ನು ಭಾನುವಾರವಾದರೆ ಸಾಕು, ಮನೆಯಲ್ಲಿ ಇರೋಹಾಗೇ ಇಲ್ಲ. ಬೆಳಗ್ಗೆ ಶುರು ಆದರೆ ರಾತ್ರಿ ಮಲ್ಗೋವರೆಗೂ ಟಿ,ವಿ ಗಳಲ್ಲಿ ಮಕ್ಕಳು ಸಿನಿಮಾ ಹಾಡುಗಳನ್ನು ಚೀರಾಡಲು ಶುರು ಮಾಡಿಬಿಡುವರು. ಅದರ ಬದಲು ಆ ಮಕ್ಕಳು ಪುಸ್ತಕವಾದರೂ ಓದಿದ್ದರೆ ಮತ್ತೊಬ್ಬ ವಿಶ್ವೇಶ್ವರಯ್ಯನೋ, ಸಿ.ವಿ.ರಮನ್ನೋ  ಇಲ್ಲ ಇಂದಿರಾ ಗಾಂಧಿಯೋ ಆಗುತ್ತಿದ್ದರೋ ಏನೋ.
ಇಷ್ಟಕ್ಕೇ ನಮ್ಮ ಮನೆಯ ಟಿ.ವಿ ತಕರಾರು ಮುಗಿದಿರಲ್ಲ. ದಾರಾವಾಹಿಯಲ್ಲಿ ಮುಂದೆ ಏನಾಗುವುದು ಅಂತ ಅಪ್ಪ ಅಮ್ಮನ ನಡುವೆ ಕಾಳಗವೇ ನಡೆಯುತ್ತದೆ. ಅದು ಸಾಲದು ಅಂತ ಅದರಲ್ಲಿ ಬರುವ ಪಾತ್ರಗಳಿಗೆ ಮಕ್ಕಳಾದ ನಮ್ಮನ್ನು ಹೋಲಿಸುವುದು ಬೇರೆ!!! ಯಾರು ಹೇಳಿದರು ತಂದೆ ತಾಯಂದಿರು ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ ಎಂದು?? ಇದಕ್ಕಿಂತ ಕೆಟ್ಟದ್ದು ಇನ್ನೇನಾದರೂ ಇದೆಯ?
ಈ ನಡುವೆ ಹೊಸ ಗೀಳೊಂದು ಶುರು ಆಗಿದೆ. ಜ್ಯೋತಿಶ್ಯ ಹಾಗು ವಾಸ್ತು ಎಂಬ ಗೀಳು. ಹಿಂಗೆ ಯಾವುದೋ ಟಿ.ವಿ. ಜ್ಯೋತಿಶಿಯ ವಾಕ್ಯ ವೇದದ ದೆಸೆಯಿಂದ ನಮ್ಮ ಮನೆಯ ಮುಂದಿರುವ ಮೋರಿಯನ್ನೇ ಮುಚ್ಚಿಸಲು ಹೋದ ಅಪ್ಪ ಮುನಿಸಿಪಾಲಿಟಿ ಕಚೇರಿಯ ಕೆಂಗಣ್ಣಿಗೆ ಗುರಿಯಾಗಿ ವಿಷಯ ನನ್ನ ಜೇಬಿನ ವರೆಗೂ ಬಂದಿತ್ತು.ಯಾಕೆ ಬೇಕು ಈ ದಡ್ಡತನ ಅಂದಿದ್ದಕ್ಕೆ ನಮ್ಮಪ್ಪ ನುಡಿದದ್ದು ಎರಡೇ ಅಕ್ಷರ “ವಾಸ್ತು” ಎಂದು. ಅಲ್ಲ, ಮೋರಿ ಮುಚ್ಚಿದರೆ ವಾಸ್ತು ಅಲ್ಲ, ಅದು ಕಟ್ಟಿಕೊಂಡು ವಾಸನೆ ಬರುವುದು ಅಂತ ಯಾರು ನಮ್ಮ ಜನಕ್ಕೆ ಹೇಳೋದು?
ಇಷ್ಟೆಲ್ಲಾ ನನ್ನ ಜೀವನದ ಜೊತೆ ಆಟವಾಡುತ್ತಿರುವ ಈ ಟಿ.ವಿ ದಾರಾವಾಹಿಗಳು ಬರಿ ಸೀರಿಯಲ್ ಆಗಿರದೆ ಸೀರಿಯಲ್-ಕಿಲ್ಲರ್ ಆಗಿರುವುದರಲ್ಲಿ ಆಶ್ಚರ್ಯವೇ ಇಲ್ಲ.

No comments: