ಊರು ಕೇರಿಗಳ ಉರಿಯ ಬಿಸಿಲಿನಲಿ
ಬರಿಯ ಕಾಲಿನಲಿ ದಿನವೂ ಅಲೆದಾಡಿ
ಎಂಜಿಲು ಸಿಗದೆ ಗಂಟಲು ಒಣಗಿ
ದೇಹವೆ ಸುಟ್ಟು ಕರಕಲು ಆಗಿ
ತ್ರಾಸದಿ ಇರಲು ಮೋಡವು ಕರಗಿ
ಮಳೆ ಸುರಿದು ಬಾಯಿಗೆ ನೀರು ಹರಿದ ಹಾಗೆ
ಅನಿಸಿತು ಆ ಮೊದಲ ಚುಂಬನ
ಮಂಜಿನ ಗಡ್ಡೆಯ ಬೆಟ್ಟದ ತುದಿಯ
ಪಾದರಸವನೂ ಜಡವಾಗಿಸುವ ಚಳಿಯ
ಬಟ್ಟೆಯೇ ಇಲ್ಲದೆ ದಾರಿಯೇ ಕಾಣದೆ
ರಕ್ತ ಬೆವರುಗಳೇ ಹೆಪ್ಪಾಗಿ ಹರಿಯದೆ
ಕಣ್ಣಿನ ನೀರು ಕೆನ್ನೆಯ ಕೆಳಗಿಳಿಯದೆ ನಡುಗುವಾಗ
ಮಿಂಚು ಬಡಿದು ಬೆಂಕಿ ಹಿಡಿದು ಚಳಿಯನೋಡಿಸಿ ಉರಿದ ಹಾಗೆ
ಅನಿಸಿತು ಆ ಮೊದಲ ಆಲಿಂಗನ
ಮನೆಯಿರದೆ ಇರಲು ನೆಲೆಯಿರದೆ
ಉಡಲು ಉಡುಪಿರದೆ ತಿನ್ನಲು ಕೂಳಿರದೆ
ರಸ್ತೆಯ ದಾಸಯ್ಯ ಮಾಡಲು ಸಂಪಾದನೆಯೇ ಇರದೆ
ಮಲಗಲು ಹಾಸಿರದೆ ಕಾಣಲು ಕನಸಿರದೆ
ಇನ್ನೇನು ಹೆಣವಾಗಿ ಮಣ್ಣಾಗುವಾಗ
ಅರಮನೆ ಹೊಕ್ಕು ಮಹಾ ರಾಜನಾದ ಹಾಗೆ
ಆಯಿತು ನಿನ್ನೊಳಗೆ ನನ್ನ ಆಗಮನ
No comments:
Post a Comment