Wednesday, October 12, 2011

ಮೊಬೈಲಾಯಣ – Made In China


ಇನ್ನೇನು ಸೂರ್ಯಾಸ್ಥ ಆಗ್ತಿದೆ, ಅಲೆಗಳ ಸುಮಧುರ ಶಬ್ಧ ಒ೦ದು ಕಡೆಯಾದರೆ ಅಂದವಾದ ಹುಡುಗಿಯರ ದೃಷ್ಯ ಇನ್ನೊಂದೆಡೆ. ಅರೆ ಯಾರೊ ಸುಂದರಿ ನನ್ನ ಕಡೆಗೇ ಓಡಿ ಬರುತ್ತಿದ್ದಾಳೆ.ನನ್ನನ್ನು ಅಪ್ಪಿಕೊಳ್ಳಲೇ ಇರಬೇಕು. ಹೌದು ಅವಳು ನನ್ನನ್ನೇ ನೋಡಿಕೊಂಡು ಬರುತ್ತಿದ್ದಾಳೆ, ಬಂದಳು ಬಂದಳು……………….
“ರೀ, ರೀ ಎದ್ದೇಳಿ ಮೇಲೆ. ಸೋಮಾರಿಹಾಗೆ ಯಾವಾಗ್ಲು ಮಲ್ಗಿರ್ಬೇಡಿ!!! ನೋಡಿ ಮನೆಗೆ ಯಾರು ಬಂದಿದಾರೆ ಅಂತ “. ನನ್ನ ಸ್ವಪ್ನ ಸ್ವರ್ಗ ಇಲ್ಲಿಗೆ ಒಡೆದು ಬಿತ್ತು. ಥು ಕನಸಿನಲ್ಲೂ ಬೇರೆ ಹೆಂಗಸನ್ನು ನೋಡಲು ಬಿಡುವುದಿಲ್ಲ ರಾಕ್ಷಸಿ ಅಂತ ಬೈಕೊಂಡು ಮೇಲೆದ್ದೆ.
ಇನ್ನೇನು ಕಣ್ಣೂ ಉಜ್ಜಿಕೊಂಡು ನನಗೆ ಬಿದ್ದಿದ್ದು ಬರಿ ಕನಸು ಅಂತ ಬೇಸರದಿಂದ ಏಳಬೇಕು ಅಷ್ಟರಲ್ಲಿ ಕುರ್ಚಿಯಮೇಲೆ ಯಾವುದೋ ಧಡೂತಿ ಆಕಾರ ಕಂಡಿತು.ಇನ್ಯಾರಪ್ಪ ನನ್ನ ನಿದ್ದೆ ಹಾಳು ಮಾಡಕ್ಕೆ ವಕ್ಕರಿಸಿಕೊಂಡದ್ದು ಅಂದರೆ ತಿಳಿದದ್ದು ಅದು ನಮ್ಮ ಮನೆ ಪಕ್ಕದಲ್ಲಿರೋ ಮೊಬೈಲ್ ಫೊನ್ ಅಂದರೆ ಸಂಚಾರಿ ದೂರವಾಣಿ ಅಂಗಡಿ ಮಾಲೀಕ ಮಾದಪ್ಪ ಅಂತ.
ಇದೇನಿದು? ಎಲ್ಲಾಬಿಟ್ಟು ನಮ್ಮನೇಗೆ ಬಂದಿದಾನೇ ಈ ಮಾದಪ್ಪ ಅಂತ ಆಷ್ಚರ್ಯ ಆಯಿತು. ಅಷ್ಟರಲ್ಲಿ ನನ್ನ ಹೆಂಡತಿ ಅಡಿಗೆ ಮನೆಯಿಂದ ಕಾಫಿ ತಂದೇಬಿಟ್ಟಳು. ತಂದಿದ್ದೇ ಅವನಿಗೆ ಕೊಟ್ಟು ಅದೇನೋ ಯಾವ ಮೊಬೈಲ್, ಏನು ಫೀಚುರ್ಸ್ ಅಂತೆಲ್ಲ ಏನೇನೋ ಕೇಳಿ ನನ್ನ ಕಿಸೆಯಿಂದ ನನ್ನನ್ನು ಕೇಳದೆಯ ೫೦೦೦ ರುಪಾಯಿಗಳನ್ನು ಕೊಟ್ಟೇಬಿಟ್ಟಳು. ನನಗೆ ಅರ್ಥ ಆಗುವುದರೊಳಗೆ ಅವನು ಕಾಫಿ ಕುಡಿದ ಲೋಟ ನನ್ನ ಕೈಗಿತ್ತು ಮನೆಯಿಂದ ಹೊರಟೇ ಬಿಟ್ಟ.
ಅವನು ಹೋಗೋದನ್ನೇ ಕಾದು ನನ್ನ ಹೆಂಡತಿಗೆ, “ಏನೇ ಇದು? ಔನ್ ಯಾಕೆ ಇಲ್ಲೀಗ್ ಬಂದಿದ್ದ ಮಹಾ ಮೋಸಗಾರ ಅವನು. ಎಲ್ಲಾ ಬಿಟ್ಟು ಅವನಿಗ್ಯಾಕೆ ದುಡ್ಡು ಕೊಟ್ಟೆ? “ ಅಂದಾಗ ನನ್ನ ಹೆಂಡತಿ “ರೀ ನಿಮಗೆ ಒಂದು ವಿಷಯ ಹೇಳ್ಬೆಕು ಆದ್ರೆ ನೀವು ಬೈಬಾರ್ದು ಪ್ಲೀಜ್. ನಾನು ಒಂದು ಹೊಸಾ “mobile phone” ಕೊಂಡೆ. ಅದಿಕ್ಕೆ ಅವನಿಗೆ ದುಡ್ಡು ಕೊಟ್ಟದ್ದು. ಅದರಲ್ಲಿ ಟಿ.ವಿ ಬೇರೆ ಬರತ್ತಂತೆ. ಅಲ್ದೆ ಎರಡೆರಡು “sim card”, ಉತ್ಕೃಷ್ಟ “camera”, “f.m/mp3” ಮತ್ತೆ “memory” ಬೇರೆ ಜಾಸ್ತಿ ಅಂತೆ. ಅದು ದುಬಾರಿ ಕೂಡ ಅಲ್ಲ ಬರಿ ೫೦೦೦ ರುಪಾಯಿ” ಅಂತ ಪೂಸಿ ಹೊಡಿಯೋದಕ್ಕೆ ಶುರು ಮಾಡಿದಳು. ಇನ್ನೇನಪ್ಪ ಬಂತು ಗಂಡಾಂತರ ಅಂತ ನನಗೂ ತಲೆ ಕೆಟ್ಟಿತು. ಈ ಹೆಂಗಸರು ಮದುವೆ ಆದಮೇಲೆ ಎರಡೇ ವಿಶಯಕ್ಕೆ ಮಾತ್ರವಂತೆ ಗಂಡನನ್ನು ಮೃದುವಾಗಿ ಮಾತನಾಡಿಸುವುದು. ಒಂದು ತಪ್ಪು ಮಾಡಿ ಸಿಕ್ಕಿಕೊಂಡಾಗ ಇನ್ನೊಂದು ಎನಾದರು ಬಹಳ ದುಬಾರಿ ವಸ್ತು ಬೇಕಾದಾಗ. ಇವಳ ಪೂಸಿ “intensity” ನೋಡಿದಾಗಲೆ ತಿಳಿಯಿತು, ಇದು ಎರಡರದೂ “mixture” ಅಂತ. ಇನ್ನು ಮುಗಿಯಿತಲ್ಲಪ್ಪ ನನ್ನ ಕಥೆ ಅಂದುಕೊಂಡೆ. ಹೋಗಲಿ ಇಷ್ಟು ಕಡಿಮೆ ಬೆಲೆಗೆ ಇಷ್ಟೆಲ್ಲ ಸಿಗತ್ತಲ್ಲ ಅಂತ ಮನಸ್ಸಿನಲ್ಲಿ ಇವಳ ಜಾಣ್ಮೆಗೆ ಖುಷಿಯೂ ಆಯಿತು.
ಆದರೂ ಗಂಡ ಅಲ್ವ, ಸ್ವಲ್ಪ ಜೋರು ಮಾಡಣ ಅಂತ, “ ಲೇ ಅಲ್ವೆ ನಿಂಗೆ ತಲೆ ಕೆಟ್ಟಿದೆಯ? ಹೋಗಿ ಹೋಗಿ ಆ ಮಾದೇಶನ ಹತ್ತಿರ ಹಣ ಕೊಟ್ಟೆಯಲ್ಲ ಹೋಗಲಿ ಅದಕ್ಕೆ ರಶೀತಿಯಾದರು ಕೇಳಿದೆಯ? “ ಅಂದದ್ದಕ್ಕೆ, ಅವಳು ಇನ್ನೆಲ್ಲಿ ಬೈದುಬಿಡುವೆನೊ ಅಂತ, “ ನೋಡಿ ನೀವು ಹಿಂಗೆಲ್ಲ ಏನೆನೋ ಕೇಳಿದರೆ ನಾನು ಅಡಿಗೆ ಮಾಡುವುದೆ ನಿಲ್ಲಿಸಿ ಬಿಡುತ್ತೇನೆ. ಕೆಲ್ಸ ಮಾತ್ರ ಮಾಡಬೇಕು, ಕೇಳಿದ್ದನ್ನು ಕೊಡಿಸಲು ಮಾತ್ರ ಯೋಗ್ಯತೆ ಇಲ್ಲ “male chauvinist” ಅಂತ ರಂಪ ತೆಗೆದಳು. ಬಂತಲ್ಲಪ್ಪ ಮಾನಕ್ಕೆ ಸಂಚಕಾರ ಅದೂ ಇವಳಿಂದ ಅಂತ ಮೆಲ್ಲಗೆ, “ ಅಲ್ವೆ ಚಿನ್ನ ಯಾಕೆ ಕೋಪ ಮಾಡಿಕೊತೀಯ, ನಾನು ಕೇಳಿದ್ದು ಅದು ಕೆಟ್ಟುಹೋದರೆ ರಿಪೇರಿ ಮಾಡಿಸಿಕೊಳ್ಳಬಹುದು ಅಂತ ಕಣೆ, ಅದಕ್ಕೆಲ್ಲ ಹಿಂಗೆ ಕೋಪುಸ್ಕೊತಾರ?? ಅಂತ ನಾನು ಕೊನೆಗೆ ಪೂಸಿ ಹೊಡೆದೆ.
ಕೊನೆಗು ಮೊಬೈಲ್ ಮನೆಗೆ ಬಂದೇ ಬಿಟ್ಟಿತು. ನೋಡಲು ಅಗಲವಾಗಿ ದಪ್ಪವಾಗಿ ದುಬಾರಿ ಯಾಗಿ ಕಾಣುತ್ತಿತ್ತು. ನನಗೆ ಮನಸಲ್ಲಿ ಹಿಗ್ಗು ಇದ್ದರೂ ಹೊರಗೆ ನನ್ನವಳು ಎನೋ ತಪ್ಪು ಮಾಡಿರುವಂತೆ ಮುಖ ಗಂಟು ಹಾಕಿಕೊಂಡಿದ್ದೆ. ಬಂದ ಮೊಬೈಲ್ ಎಂಬ ಅಥಿತಿಗೆ ಪೂಜೆ ಆಗಿದ್ದೇನು, ಕಣ್ಣಿಗೊತ್ತಿಕೊಂಡಿದ್ದೆನು, ಏನು ಆತುರ, ಏನು ಸಡಗರ!! ಸರಿ ಅದರ ಎಲ್ಲಾ ಫೀಚರ್ಸ್ನ ಪರೀಕ್ಶೆ ನಡೆದೇ ಹೊಯಿತು.ಟಿ.ವಿ ಯಂತೆ, ರೇಡಿಯೊ ಅಂತೆ, ಇನ್ನು ಏನೇನೊ….
ಮನೆಗೆ ಬಂದು ಎಷ್ಟು ಹೊತ್ತಾದರೂ ನಮ್ಮ ಫೋನಿಗೆ ಯಾರು ರಿಂಗಾಯಿಸಿಯೇ ಇರಲಿಲ್ಲ. ಬೇಸರಗೊಂಡ ನನ್ನ ಪತ್ನಿಯೆಂಬ ಪ್ರಾಣಿ ಕೊನೆಗೆ ನನ್ನ ಫೊನನ್ನೇ ತೆಗೆದುಕೊಂಡು, ತನ್ನ ಫೋನಿಗೆ ರಿಂಗಾಯಿಸಿ ಇನ್ನೊಂದು ಹುಚ್ಚುತನದ ಪ್ರದರ್ಶನ ಮಾಡಿದಳು. ಹೊಸ ಫೋನಿಗೆ ಕರೆ ಬಂದೇಬಿಟ್ಟಿತು, ಇವಳು ಅದಕ್ಕೆ ಓಗೊಟ್ಟೂಬಿಟ್ಟಳು. “ಅರೆ, ಹೊಸ ಫೋನಿನಲ್ಲಿ ಏನು ಕೇಳಿಸ್ತಾನೇ ಇಲ್ಲ!!!” ಎಂದು ನನ್ನ ಪತ್ನೀಮಣಿ ಉದ್ಗರಿಸಿದಳು. ಅಯ್ಯೊ ಇನ್ನೇನಪ್ಪ ಕಾದಿದೆ ಅಂತ ನಾನು ಕೈಲಾದ ಪ್ರಯತ್ನವೆಲ್ಲಾ ಮಾಡಿ ನೋಡಿದೆ, ಕಡೆಗೆ ಹಳೆ “ಟ್ರಾನ್ಸಿಸ್ಟರ್” ಪೆಟ್ಟಿಗೆಗೆ ಹೊಡೆಯುವಂತೆ ಅದಕ್ಕೆ ಎರಡು ಬಾರಿಸಿಯೂ ನೋಡಿದೆ. ಊಹು, ಬಗ್ಗಲೇ ಇಲ್ಲ!!! ಹೋ ಮಾದೇಶ ಇಟ್ಟನಲ್ಲಪ್ಪ ಇನ್ನೊಂದು ಪಂಗನಾಮ ಎಂದು ಯೋಚಿಸುತ್ತಿರುವಾಗ ನನ್ನ ದೃಷ್ಟಿ ಫೋನಿನ ಮೇಲಿದ್ದ ಒಂದು ಸಣ್ಣ ಸಾಲಿನ ಮೇಲೆ ಬಿತ್ತು “Made In China” !!! ಅಂದಿನಿಂದ ಅದು ನಮ್ಮ ಮನೆಯ ಟ್ರಾನ್ಸಿಸ್ಟರ್ ಆಗಿ ಅಟ್ಟ ಸೇರಿದೆ.

No comments: