Wednesday, October 12, 2011

ಕನ್ನಡ ಬರಲ್ವ??


(ನನ್ನ ಗೆಳೆಯ ಅಭಿಷೇಕ್ ಅಯ್ಯಂಗಾರ್ ಅವರ “ಕನ್ನಡ ಬರುತ್ತ” ಎಂಬ ಅತಿ ಜನಪ್ರಿಯ ಲೇಖನ ಈ ನನ್ನ “ಕನ್ನಡ ಬರಲ್ವ??” ಕ್ಕೆ ಸ್ಪೂರ್ತಿ. “ಕನ್ನಡ ಬರುತ್ತ” ಎಂಬ ನಾಣ್ಯದ ಇನ್ನೊಂದು ಮುಖವನ್ನು ಪರಿಚಯಿಸುವುದು “ಕನ್ನಡ ಬರಲ್ವ??” ದ ಪ್ರಯತ್ನವಾಗಿದೆ. )
“ ಒಂದು ಪಾನಿ ಪುರಿ ಹಾಕಪ್ಪ” ಹೊಟ್ಟೆ ತಾಳ ಹಾಕಿ ಏನು ಸಿಕ್ಕಿದರೂ ತಿನ್ನುವ ಪರಿಸ್ಥಿತಿ ಬಂದಾಗ ನನಗೆ ಕಂಡಿದ್ದು ಬುಟ್ಟಿಯಲ್ಲಿ ಪುರಿಗಳನ್ನು ಗಲೀಜಾಗಿ ಒಂದು ಮೋರಿಯ ಮೇಲೆ ಇಟ್ಟುಕೊಂಡು ನಿಂತಿದ್ದ ಒಬ್ಬ ಹುಡುಗ. ನಾನು ಕೇಳಿದ ಪ್ರಷ್ನೆಗೆ ಸಿಡಿಲೇ ಬಂದು ಬಡಿಯಿತೇನೋ ಅನ್ನೋ ಹಾಗೆ ನನ್ನ ನೋಡಿ “ ಕ್ಯಾ ಚಾಹಿಯೇ ಸಾಬ್” ಅಂದುಬಿಡೋದೇ??
ಒಂದು ನಿಮಿಷ ನಾನು ಎಲ್ಲಿದೀನಿ ಅಂತ ನನಗೇ ಗೊತ್ತಾಗಲಿಲ್ಲ. ಆಮೇಲೆ ಹೋಳೀತು, ಅರೆ ನಾನು ಮಲ್ಲೇಷ್ವರದ ಸಂಪಿಗೆ ರಸ್ತೆಯಲ್ಲಲ್ವೇ ನಿಂತಿರೋದು ಅಂತ. ಅಬ್ಬಬ್ಬ ನನ್ನ ಜೀವನದ ಕಳೆದ ೨೪ ವರ್ಷಗಳಲ್ಲಿ ಇಂಥ ಪ್ರಷ್ನೆ ಯಾರೂ ಕೇಳಿರಲಿಲ್ಲ. ಕೊನೆಗೆ “ಕನ್ನಡ ಬರಲ್ವ?” ಅಂತ ಕೇಳಿದಾಗ ಗೊತ್ತಾಯ್ತು ಅವನು ಯಾವುದೋ ಬಿಹಾರದಿಂದ ಇಲ್ಲಿ ತನ್ನ ಹೋಟ್ಟೆ ಪಾಡಿಗಾಗಿ ಬಂದಿರುವವನೆಂದು. ಅವನ ಪರಿಸ್ಥಿತಿ ಕಂಡು ನನಗೆ ಅಯ್ಯೋ ಅನ್ನಿಸಿತು.
“ಅಲ್ಲ ರೀ ನಮ್ಮ ಕರ್ನಾಟಕದಲ್ಲಿ ಹೊಟ್ಟೆ ತುಂಬಿಸ್ಕೋತಿದೀರ, ಕನ್ನಡ ಕಲ್ಯಕ್ ಆಗಲ್ವ? ಇನ್ನೂ ನಿಮಗೆ ಕನ್ನಡ ಬರಲ್ವ?” ಅನ್ನೋ ಮಾತು ನಾವು ಅದೆಷ್ಟು ಸಲಿ ಕೇಳಿಲ್ಲ. ಈ ಮಾತು ಒಂದು ಮಟ್ಟಿಗೆ ನ್ಯಾಯವೂ ಹೌದು. ಆದರೆ ಇತ್ತೀಚೆಗೆ ನಡೆದ ಒಂದು ಘಟನೆ ನನ್ನಲ್ಲಿ ಬೇರೆ ದೃಷ್ಟಿ ಕೋನವನ್ನೇ ಹುಟ್ಟಿಸಿತು.
ರಾಜು ನನ್ನ ಬಹಳ ಆಪ್ತ ಗೆಳೆಯ. ನನಗೆ ಅವನ ಪರಿಚಯ ಸುಮಾರು ೧೫-೧೬ ವರ್ಷ ಹಳೆಯದು. ಅವನು “ಪೂರ್ವ ಭಾರತೀಯರು” ಬೆಂಗಳೂರಿಗೆ ಬಂದು ಇಲ್ಲಿ ಅವರ ಭಾಷೆ ಬೆಳೆಸಿ ಕನ್ನಡದ ಬಳಕೆ ಕಡಿಮೆ ಆಗುತ್ತಿರುವುದರ ಕಟ್ಟಾ ವಿರೋಧಿ. ಕನ್ನಡ ಬರದವರನ್ನು ಕಂಡರೆ ಅವನು ಅವರನ್ನು ಕೇಳುವುದು ಒಂದೇ ಮಾತು “ಕನ್ನಡ ಬರಲ್ವ?” ಅಂತ. ಕಚೇರಿಯಲ್ಲಾಗಲಿ, ಅದರ ಹೊರಗಡೆ ಆಗಲಿ ಅವನು ತನ್ನದೇ ಆದ ಸ್ಥಳೀಯರ ಗುಂಪಿನಲ್ಲೇ ಕಾಲ ಕಳೆಯುತ್ತಿದ್ದ. ಅವನು ಅವರನ್ನು ಅದೆಷ್ಟು ದ್ವೇಷಿಸುತ್ತಿದ್ದ ಎಂದರೆ ಅವರಿಂದಲೇ ಜನ್ಮ ಪಡೆದ ಪಾನಿಪುರಿ ಕೊಂಡುಕೊಳ್ಳಲೂ ಸ್ಥಳೀಯ ಮಾರಾಟಗಾರರನ್ನೇ ಹುಡುಕುತ್ತಿದ್ದ.
ರಾಜುವಿಗೆ ಇದ್ದ ಇನ್ನೊಂದು ಆಸಕ್ತಿ ಎಂದರೆ ಕಥೆ ಬರೆಯುವುದು. ಅವನಿಗೆ ಅದಾವುದೋ ಚಿಕ್ಕ ವಯಸ್ಸಿನಲ್ಲಿ ಕೇಳಿದ ಒಂದು ಗುಬ್ಬಚ್ಚಿಯ ಕಥೆಯೇ ಸ್ಪೂರ್ತಿಯಂತೆ. ಒಂದು ಗುಬ್ಬಚ್ಚಿ ಹೇಗೆ ದಾರಿ ತಪ್ಪಿ ಕಾಗೆಯ ಗೂಡು ಸೇರಿ ಕಾಗೆಯ ಮರಿಗಳ ಜೂತೆಯಲ್ಲಿ ಬೆಳೆಯುತ್ತದೆ ಹಾಗು ಮುಂದೆ ಜೀವನವನ್ನು ಹೇಗೆ ಎದುರಿಸುತ್ತದೆ ಎನ್ನುವುದೇ ಆ ಕಥೆಯ ಸಾರಾಂಶ. ಈ ಕಥೆಯಲ್ಲಿ ಗುಬ್ಬಚ್ಚಿಯ ಕಷ್ಟಗಳಲ್ಲಿ ಮನುಷ್ಯನ ಜೀವನದ ದುರಂತಗಳನ್ನು ಬಣ್ಣಿಸಿರುವುದು ರಾಜುವಿನ ಮೇಲೆ ಬಹಳ ಪ್ರಭಾವ ಬೀರಿದ ಅಂಶ.
ತುಂಬ ಹಿಂದೆ ಓದಿದ್ದ ಕಾರಣ ಈ ಕಥೆಯನ್ನು ಬರೆದ ಲೇಖಕನ ಪೂರ್ಣ ಹೆಸರನ್ನು ರಾಜು ಮರೆತಿದ್ದ. ಅವನಿಗೆ ಜ್ನ್ಯಾಪಕ ಇದ್ದಿದ್ದೆಂದರೆ ಆ ಲೇಖಕನ ಮೊದಲನೆಯ ಹೆಸರು ರಾಮಚಂದ್ರ ಎಂದು ಅಷ್ಟೆ. ಆಂಗ್ಲ ಭಾಷೆಯಲ್ಲಿದ್ದರೂ ಕಥೆಯನ್ನು ಒಬ್ಬ ಕನ್ನಡವನ್ನು ಬಲ್ಲವರೇ ಬರೆದಿರುವರು ಎಂಬ ಹೆಮ್ಮೆ. ಮೊನ್ನೆ ಯಾವುದೋ ಕವಿ ಸಮ್ಮೇಳನದಲ್ಲಿ ಹೀಗೇ ಯಾರೊಡನೆಯೋ ಮಾತನಾಡುವಾಗ ರಾಮಚಂದ್ರ ಎಂದರೆ ಕರ್ನಾಟಕದಲ್ಲಿ ನೆಲೆಸಿದ್ದ ಬಂಗಾಲಿ ಮೂಲದ ರಾಮಚಂದ್ರ ಚಟರ್ಜಿ ಎಂದು ಹೇಳುವುದನ್ನ ಕೇಳಿ ನಮ್ಮ ರಾಜುವಿನ ಮುಖ ಹೆಪ್ಪುಗಟ್ಟಿತು, ಕಣ್ಣಲ್ಲಿ ನಿರಾಶೆ ಮೂಡಿತು. ಅನ್ಯಾಯವಾಗಿ ಅವರ ಕಥೆಗಳನ್ನು ಇಷ್ಟ ಪಟ್ಟೆನಲ್ಲ ಎಂದು ರಾಜುವಿಗೆ ದುಖಃವೂ ಆಯಿತು. “ ಅಲ್ಲ ಕಣಯ್ಯ, ಕನ್ನಡ ಬರದಿದ್ದರೆ ಏನಾಯಿತು? ಅವರ ಕಥೆಗಳಲ್ಲಿ ವಿಷಯ ಒಳ್ಳೆಯದಲ್ಲವೇ? ಅವರ ಕಥೆಯಲ್ಲಿ ಅವರಿಗಿರುವ ಒಳ್ಳೆಯ ಅಂತಃಕರಣ ಎದ್ದು ಕಾಣುವುದಿಲ್ಲವೇ?” ಎಂದು ನಾನು ಸಮಾಧಾನಪಡಿಸಿದ ಮೇಲೆ ಅವನಿಗೆ ಕೊಂಚ ನೆಮ್ಮದಿ ಬಂದಂತಾಯಿತು. ಅಂದನಿಂದ ಅವನು ಕನ್ನಡ ಬರದಿದ್ದವರಿಗೆ “ಕನ್ನಡ ಬರಲ್ವ?” ಎಂದು ಕೇಳುವುದರ ಜೊತೆಗೆ “ ಬರದಿದ್ದರೆ, ನಾನ್ ನಿಮಗೆ ಕಲಿಸಿಕೊಡುತ್ತೇನೆ” ಎಂದೂ ಹೇಳತೊಡಗಿದ.
ಈ ಘಟನೆಯ ನಂತರ ನಾನು ಕಲ್ತದ್ದೇನೆಂದರೆ ನಮಗೆ ಕನ್ನಡದ ಮೇಲೆ ಅಭಿಮಾನ ಇರಬೇಕೆ ಹೊರತು ಬೇರೆ ಭಾಷೆಗಳ ಮೇಲೆ ದ್ವೇಷ ಅಲ್ಲ. ಕನ್ನಡದ ಮೇಲೆ ಅನ್ಯಾಯವನ್ನು ವಿರೋಧಿಸಬೇಕೆ ಹೊರತು ಬೇರೆ ಭಾಷೆಯವರಿಗೆ ಹಿಂಸೆ ಕೊಡುವುದು ಇದಕ್ಕೆ ಉತ್ತರವಲ್ಲ. ಭಾಷೆ ಸಂಸ್ಕೃತಿಯ ಕನ್ನಡಿ ಇದ್ದ ಹಾಗೆ. ಅದು ಮನುಶ್ಯರ ನಡುವೆ ಸಂಪರ್ಕಕ್ಕೆ ಬಳಸುವ ಶಬ್ಧ ಪುಂಜ ಅಥವ ಜ್ನಾನ ವೃದ್ಡಿಸುವ ಮಾಧ್ಯಮವಾಗೇ ಉಳಿದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು? ಬದಲಿಗೆ ಇವತ್ತು ಮನುಷ್ಯ ಅದನ್ನು ಕ್ರೌರ್ಯ, ಸ್ವಾರ್ಥ, ಯುದ್ಧ ಹಾಗು ಮೋಸಗಳಿಗೆ ಬಳಸುತ್ತಿರುವುದು ಒಂದು ದುರಂತವೇ ಸರಿ.

No comments: